ಮಾಜಿ ಸಚಿವೆ ಮೋಟಮ್ಮ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತರು: ಹೆಚ್ಚಿದ ಭಹಿರಂಗ ಸಭೆ
ಚಿಕ್ಕಮಗಳೂರು, ಜನವರಿ 14: ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರ ಮೂಡಿಗೆರೆಯಲ್ಲಿ ಮಾಜಿ ಸಚಿವೆ ಮೋಟಮ್ಮ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಮೋಟಮ್ಮ ಮಗಳಿಗೆ ಟಿಕೆಟ್ ಕೊಡಲೇಬೇಡಿ, ಕೊಟ್ಟರೆ ಸೋಲು ಕಟ್ಟಿಟ್ಟಬುತ್ತಿ ಎಂದು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ.
ವಿಧಾನಸಭಾ ಚುನಾವಣಾ ಕಣ ಕ್ರಮೇಣ ರಂಗೇರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನದ ಹೊಗೆಯೂ ಸ್ಫೋಟಗೊಳ್ಳುತ್ತಿದೆ. ಕಾರ್ಯಕರ್ತರೇ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದು ಅವರಿಗೆ ಟಿಕೆಟ್ ಕೊಡಲೇ ಬೇಡಿ, ಕೊಟ್ಟರೆ ಸೋಲು ಖಚಿತ ಎಂದು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ.
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಮೂಡಿಗೆರೆ ತಾಲೂಕಿನಲ್ಲಿ ನಡೆದ ಐದಾರು ಹೋಬಳಿಗಳ ಕಾರ್ಯಕರ್ತರ ಸಭೆಯಲ್ಲಿ ಒಂದೇ ಧ್ವನಿ ಮೋಟಮ್ಮ ಪುತ್ರಿ ನಯನ ಮೋಟಮ್ಮಳಿಗೆ ಟಿಕೆಟ್ ಬೇಡ ಎನ್ನುವುದು. ಗುರುವಾರ ಗೋಣಿಬೀಡು ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲೂ ಮೋಟಮ್ಮ ವಿರುದ್ಧ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲುತ್ತದೆ ಎಂದು ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಮೂಡಿಗೆರೆಯಲ್ಲಿ ಕಾಂಗ್ರೆಟ್ ಟಿಕೆಟ್ ಆಕಾಂಕ್ಷಿಗಳ ಭರ್ಜರಿ ಲಾಬಿ ನಡೆಯುತ್ತಿದೆ. ನಾಗರತ್ನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ನಿವೃತ್ತಿಯಾಗಿರುವ ಶ್ರೀರಂಗಯ್ಯ ಕೂಡ ಮೀಸಲು ಕ್ಷೇತ್ರದ ಕಾಂಗ್ರೆಸ್‌ಗೆ ಭಾರೀ ಲಾಬಿ ನಡೆಸುತ್ತಿದ್ದಾರೆ. ಜೊತೆಗೆ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಕೂಡ. ಆದರೆ, ಮೋಟಮ್ಮ ವಿರುದ್ಧ ತಿರುಗಿ ಬಿದ್ದಿರೋ ಕಾಂಗ್ರೆಸ್ ಕಾರ್ಯಕರ್ತರು ಅವರ ಮಗಳಿಗೆ ಟಿಕೆಟ್ ನೀಡಬೇಡಿ ಎಂದು ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದು, ಪಕ್ಷದ ವರಿಷ್ಠರನ್ನೂ ಭೇಟಿ ಮಾಡೋದಕ್ಕೆ ತೀರ್ಮಾನಿಸಿದ್ದಾರೆ. ಹೋಬಳಿಯ ಕಾಂಗ್ರೆಸ್ ಸಭೆಯಲ್ಲಿ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗಿಯಾಗದ್ದರು.

ಎಲ್ಲರೂ ಕೂಡ ಮೋಟಮ್ಮ ಮಗಳಿಗೆ ಟಿಕೆಟ್ ನೀಡೋದಕ್ಕೆ ವಿರುದ್ಧವಾಗಿದ್ದಾರೆ. ಮೂಡಿಗೆರೆಯಲ್ಲಿ ಮೋಟಮ್ಮ ಕುಟುಂಬ ರಾಜಕಾರಣ ಕೊನೆಯಾಗಬೇಕು, ಹೊಸ ಮುಖಕ್ಕೆ ಟಿಕೆಟ್ ನೀಡಿ ಎಂದು ಆಗ್ರಹಿಸಿದ್ದಾರೆ. ಮೋಟಮ್ಮ ವಿಧಾನ ಪರಿಷತ್ ಚುನಾವಣೆಲ್ಲಿ ಗಾಯತ್ರಿ ಶಾಂತೇಗೌಡರ ವಿರುದ್ಧ ಕೆಲಸ ಮಾಡಿದ್ದರು. ಇಡೀ ಕ್ಷೇತ್ರ ಮೋಟಮ್ಮ ಕುಟುಂಬದ ವಿರುದ್ಧವಿದೆ. ಹಾಗಾಗಿ, ಅವರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ. ಅವರಿಗೆ ಟಿಕೆಟ್ ಬೇಡವೇ ಬೇಡ ಎಂದು ಆಗ್ರಸಿದ್ದಾರೆ.












Click it and Unblock the Notifications