ಕೈಕೊಟ್ಟ ಮುಂಗಾರು: ಬರದ ಛಾಯೆಯಿಂದ ತಪ್ಪಿಸಿಕೊಳ್ಳಲು ಮಲೆನಾಡಿಗರು ಮಾಡಿದ್ದೇನು?, ಇಲ್ಲಿದೆ ವಿವರ
ಚಿಕ್ಕಮಗಳೂರು, ಜೂನ್, 29: ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ನದಾತರು ದೇವವ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಗಾಗಿ ಗಡಿ ಮಾರಿಗೆ ಪೂಜೆ ಸಲ್ಲಿಸಿದ್ದಾರೆ.
10 ವರ್ಷಗಳ ಬಳಿಕ ಮಳೆಗಾಗಿ ಗಡಿ ಮಾರಿಗೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲೆನಾಡಿನಲ್ಲೂ ವಾಡಿಕೆಯಷ್ಟು ಮಳೆ ಬಾರದ ಹಿನ್ನೆಲೆ ಗಡಿ ಮಾರಿಗೆ ಪೂಜೆ ಸಲ್ಲಿಸಿ ಮಳೆ ಕರುಣಿಸುವಂತೆ ದೇವಿಗೆ ಬೇಡಿಕೊಂಡಿದ್ದಾರೆ. ಅಲ್ಲದೆ ಮೆಣಸೂರು ಗ್ರಾಮದ ಗಡಿಯಲ್ಲಿ ಗಡಿಮಾರಿಗೆ ಪೂಜೆ ಮಾಡಿ ಮತ್ತೊಂದು ಗ್ರಾಮದ ಗಡಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

ಮಲೆನಾಡಲ್ಲೂ ಬಾರದ ಮಳೆ
ಈ ಬಾರಿ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಮಳೆ ಕೊರತೆ ಎದುರಾಗಿದೆ. ವಾಡಿಕೆಯಷ್ಟು ಮಳೆ ಮಲೆನಾಡಲ್ಲೂ ಬಂದಿಲ್ಲ. ಇದರಿಂದ ಮಲೆನಾಡಿಗರು ಆತಂಕಗೊಂಡಿದ್ದಾರೆ. ಇಷ್ಟೊತ್ತಿಗೆ ಕಾಫಿನಾಡಿನ ಹಳ್ಳಕೊಳ್ಳ, ನದಿಗಳು ತುಂಬಿ ಹರಿಯಬೇಕಿತ್ತು. ಆದರೆ ಈ ಬಾರಿ ಮಳೆ ಬಾರದ ಕಾರಣ ಜನರು ದೇವರ ಮೊರೆ ಹೋಗಲು ಪ್ರಾರಂಭಿಸಿದ್ದಾರೆ.
ಕೊಡಗು ಜಿಲ್ಲೆ ಜನರಲ್ಲಿ ಆತಂಕ
ಜೂನ್ ತಿಂಗಳು ಕೊನೆಯಾದರೂ ವರುಣನ ಮುನಿಸು ಶಮನವಾದಂತೆ ಕಾಣುತ್ತಿಲ್ಲ. ಪರಿಣಾಮ ಮುಂಗಾರು ಯಾವಾಗ ನಮಗೆ ದಯೆ ತೋರುತ್ತದೆಯೋ ಎಂಬ ಚಿಂತೆಯಲ್ಲಿ ಜಿಲ್ಲೆಯ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆ. ಆದರೂ ಇದರಿಂದ ಸದ್ಯಕ್ಕೆ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.
ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯನ್ನು ಗಮನಿಸುವುದಾದರೆ, ಈ ಬಾರಿ ಸರಿಯಾಗಿ ಮಳೆ ಸುರಿಯಲೇ ಇಲ್ಲ. ಜೊತೆಗೆ ಜೂನ್ ತಿಂಗಳು ಮುಂಗಾರಿನ ಆರಂಭವಾದರೂ ವಾಡಿಕೆಯ ಮಳೆ ಬರಲೇ ಇಲ್ಲ. ಇದು ಕೇವಲ ರೈತರನ್ನು ಮಾತ್ರವಲ್ಲದೆ ಜನತೆಯನ್ನು ಕೂಡ ಆತಂಕಕ್ಕೆ ತಳ್ಳಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಮಳೆಯನ್ನು ನೋಡಿದ್ದ ಜನರು ಈ ಬಾರಿ ಇನ್ನೂ ಚೇತರಿಕೆ ಕಾಣದ ಮುಂಗಾರಿನತ್ತ ಭಯದ ನೋಟ ಬೀರುವಂತಾಗಿದೆ.
ಕಳೆದ ವರ್ಷ ನವೆಂಬರ್ ಕೊನೆಯ ತನಕವೂ ಮಳೆ ಸುರಿದಿತ್ತು. ಆದರೆ ಈ ವರ್ಷ ಜನವರಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಸುರಿದ ಮಳೆಯನ್ನು ನೋಡಿದರೆ ತೀರಾ ಕಡಿಮೆ ಆಗಿದೆ. ಬೇಸಿಗೆಯಲ್ಲಿ ಮಳೆ ಬಾರದೆ ಜನ ಕುಡಿಯುವ ನೀರಿಗೆ ಪರದಾಡಿದ್ದರು. ಅಷ್ಟೇ ಅಲ್ಲದೆ ಕಾಫಿ ಗಿಡಗಳು ಒಣಗಿ ಹೋಗಿದ್ದವು. ಉಷ್ಣಾಂಶವೂ ತೀವ್ರವಾಗಿತ್ತು.
ಸಾಮಾನ್ಯವಾಗಿ ಕೊಡಗಿನ ಕಾಫಿ ಬೆಳೆಗಾರರು ಮಳೆಯನ್ನೇ ನಂಬಿದ್ದಾರೆ. ಅದರಲ್ಲೂ ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆ ಸುರಿದರೆ ಕಾಫಿ ಹೂ ಅರಳಿ ಉತ್ತಮ ಫಸಲು ಪಡೆಯಲು ಸಾಧ್ಯ ಆಗುತ್ತದೆ ಎಂದು ನಂಬಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಇನ್ನು ಈ ಸಮಯದಲ್ಲಿ ಭತ್ತದ ಕೃಷಿ ವೇಗ ಪಡೆಯಬೇಕಾದರೆ ಮಳೆಯ ಅಗತ್ಯತೆವಿದೆ. ಮಳೆ ಸುರಿದು ಹೊಳೆ, ತೋಡು ತುಂಬಿ ಹರಿದು ಗದ್ದೆಗೆ ನೀರು ಬಂದರೆ ಮಾತ್ರ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಅದು ಕೂಡ ಕಷ್ಟವೇ. ಜಿಲ್ಲೆಯಲ್ಲಿ ಕೆಲವರಿಗೆ ಮಾತ್ರ ಕೆರೆ, ನದಿಯನ್ನು ಬಳಸಿ ಭತ್ತದ ಕೃಷಿ ಮಾಡಲು ಅವಕಾಶವಿದೆ.
ಉಳಿದಂತೆ ಹೆಚ್ಚಿನವರು ಮಳೆ ಸುರಿದು ಅಂತರ್ಜಲ ವೃದ್ಧಿಯಾಗಿ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರನ್ನು ನಂಬಿ ಭತ್ತ ಬೆಳೆಯುತ್ತಾರೆ. ಅಂತಹವರು ಈ ಬಾರಿಯ ಮುಂಗಾರು ನಂಬಿ ಭತ್ತದ ಕೃಷಿ ಮಾಡುವುದು ಕಷ್ಟಸಾಧ್ಯವಾಗಿದೆ.












Click it and Unblock the Notifications