Chikkamagaluru: ಗನ್ ಸ್ವಚ್ಛಗೊಳಿಸುವಾಗ ಮಿಸ್ ಫೈರ್: ವ್ಯಕ್ತಿ ಸಾವು
ಚಿಕ್ಕಮಗಳೂರು, ಆಗಸ್ಟ್ 27: ಮನೆಯ ಶೆಡ್‌ನಲ್ಲಿದ್ದ ಗನ್ ಸ್ವಚ್ಛಗೊಳಿಸುವಾಗ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ನಡೆದಿದೆ. ಕಳವಾಸೆ ಗ್ರಾಮದ ಅರುಣ್ (47) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅರುಣ್ ಮೃತದೇಹ ನೋಡಿದ ಸ್ಥಳೀಯರು ಹೌಹಾರಿದ್ದಾರೆ.
ಕಳವಾಸೆಯ ಅರುಣ್ ಎನ್ನುವವರು ಇಂದು ಬೆಳಗ್ಗೆ ಗನ್ ಸ್ವಚ್ಛಗೊಳಿಸಲೆಂದು ಮನೆಯಿಂದ ಶೆಡ್‌ಗೆ ತೆರಳಿದ್ದಾರೆ. ಶೆಡ್‌ನಲ್ಲಿ ಹಳೆಯ ಗನ್ ತೆಗೆದು ಸ್ವಚ್ಛಗೊಳಿಸುವಾಗ ಏಕಾಏಕಿ ಫೈರ್ ಆಗಿದ್ದು, ಅರುಣ್ ಬಲಗಣ್ಣಿನ ಒಳಗೆ ನುಗ್ಗಿ ಗುಂಡು ಹೊರಬಂದಿದೆ. ಈ ದುರ್ಘಟನೆಯಲ್ಲಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ರಕ್ತದ ಕೋಡಿ ಹರಿದಿದೆ.

ಇನ್ನು ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್‌ನಲ್ಲಿ ಈ ದುರಂತ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ನಿಜವಾಗಿ ಗನ್ ಮಿಸ್ ಫೈರ್ ಆಗಿ ಸಾವು ಸಂಭವಿಸಿದೆಯೋ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಅರುಣ್ ಮೃತದೇಹವನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಅಸಲಿ ಕಾರಣ ತಿಳಿದು ಬರಬೇಕಿದೆ. ಘಟನೆ ಸಂಬಂಧ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು
ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ. ಆಹಾರ ಅರಸಿಕೊಂಡು ಬಂದಿರುವ ಒಂಟಿ ಸಲಗ ಹೈ ವೋಲ್ಟೇಜ್ ವಿದ್ಯುತ್ ಸ್ಪರ್ಶಿಸಿ ನೆಲಕ್ಕುರುಳಿ ಬಿದ್ದು ನರಳಿ ಸಾವನ್ನಪ್ಪಿದೆ.
ಸುಮಾರು 50 ವರ್ಷದ ಈ ಒಂಟಿ ಸಲಗವು ಮುತ್ತೋಡಿ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು. ಆದರೆ ನಿನ್ನೆ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ. ಆನೆ ಸಾವನ್ನಪ್ಪಿದ ಸ್ಥಳದಲ್ಲಿ ಅಡಿಕೆ ಮರದ ಜೊತೆಗೆ ವಿದ್ಯುತ್ ತಂತಿ ಕೂಡ ನೆಲಸಮವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಯಂಗಳಕ್ಕೆ ಬಂದ ಕಾಡನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡನೆಗಳ ಉಪಟಳ ಮುಂದುವರೆದಿದ್ದು, ಇಷ್ಟು ದಿನ ಕಾಫಿ ತೋಟಗಳಲ್ಲಿ ದಾಳಿ ಇಡುತ್ತಿದ್ದ ಕಾಡನೆಗಳು, ಇದೀಗ ಮನೆ ಬಾಗಿಲಿಗೆ ಬರಲು ಆರಂಭಿಸಿವೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗಾಳಿಗಂಡಿ ಗ್ರಾಮದ ಆನಂದ್ ಎಂಬುವವರ ಮನೆಯಂಗಳಕ್ಕೆ ರಾತ್ರಿ ಒಂಟಿ ಸಲಗ ಬಂದು ಆಹಾರಕ್ಕಾಗಿ ಹುಡುಕಾಡಿದೆ. ಮನೆಯವರು ಬೆಳಗ್ಗೆ ಎದ್ದು ನೋಡಬೇಕಾದರೆ ಮನೆಯಂಗಳದಲ್ಲಿ ಕಾಡಾನೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸುತ್ತಲಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ.












Click it and Unblock the Notifications