ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಚಿಕ್ಕಮಗಳೂರು,ಡಿಸೆಂಬರ್ 29: ಕಾಫಿನಾಡಿಗರ ಜೀವಕ್ಕೆ ವನ್ಯಮೃಗಗಳೇ ಕಂಟಕವಾಗುತ್ತಿವೆ. ಹುಲಿ, ಕಾಡಾನೆ, ಚಿರತೆ ದಾಳಿಗೆ ಅನೇಕರು ತಮ್ಮ ಉಸಿರು ಚೆಲ್ಲಿದ್ದು, ಕರಡಿ ದಾಳಿಯಿಂದ ಕೈ-ಕಾಲು ಕಳೆದುಕೊಂಡವರು ಇದ್ದಾರೆ. ಇದೀಗ ಕಾಡುಕೋಣ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೂಡ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಕಾಡುಕೋಣಕ್ಕೆ ಬಲಿ ಇದೇ ಮೊದಲು. ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿರುವ ಘಟನೆ ಕಳಸ ತಾಲೂಕಿನ ತೋಟದೂರು ಸಮೀಪದ ಕುಳಿಹಿತ್ಲು ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ ಕಾಡುಕೋಣ ದಾಳಿಗೆ ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ಸೋಮಶೇಖರ್ ಗುರುವಾರ ಕುಳಿಹಿತ್ಲು ಗ್ರಾಮದಲ್ಲಿ ತೋಟದ ಕೆಲಸಕ್ಕೆ ತೋಟದ ಕೆಲಸಕ್ಕೆ ತೆರಳಿದ್ದರು. ಅಡಿಕೆ ತೋಟದಲ್ಲಿ ಎಂದಿನಂತೆ ಕೆಲಸ ಮಾಡುವಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಸೋಮಶೇಖರ್ ತಕ್ಷಣ ಓಡಿಹೋಗಲು ಯತ್ನಿಸಿದರು ಕೂಡ, ಕಾಡುಕೋಣ ಹಠಕ್ಕೆ ಬಿದ್ದಂತೆ ಅವರ ಹಿಂದೆಯೇ ಓಡಿ ಮಾರಣಾಂತಿಕವಾಗಿ ತಿವಿದಿದೆ. ಸೋಮಶೇಖರ್ ಕೂಗುತ್ತಾ ಓಡಿದ್ದಾರೆ. ಅವರು ಕೂಗುತ್ತಿದ್ದಂತೆ ತೋಟದ ಮತ್ತೊಂದು ಕಡೆಯಿಂದ ಸಹೋದರ ಓಡಿ ಬಂದಿದ್ದಾರೆ. ತಕ್ಷಣ ನೀರು ಕುಡಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ದುರಾದೃಷ್ಟವಶಾತ್ ಸೋಮಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತೋಟದೂರು ಭಾಗದಲ್ಲಿ ಕಾಡಾನೆ ಹಾವಳಿ ಇದೆ. ಬೆಳಗ್ಗೆ 10-11 ಗಂಟೆ ಸುಮಾರಿಗೆ ಕಾಡಾನೆಗಳು ದಾಳಿ ನಡೆಸುತ್ತವೆ ಎನ್ನುವ ಭಯ ಸ್ಥಳೀಯರಲ್ಲಿದೆ. ಆದರೆ ಏಕಾಏಕಿ ಕಾಡುಕೋಣ ದಾಳಿ ನಡೆಸಿರುವುದು ಈ ಭಾಗದ ಜನರಿಗೆ ಮತ್ತಷ್ಟು ಭಯ ತರಿಸಿದೆ. ಕಾಡುಕೋಣದ ದಾಳಿಯಿಂದ ಸೋಮಶೇಖರ್ ದೇಹ ಸಂಪೂರ್ಣ ರಕ್ತಮಯವಾಗಿತ್ತು. ಕಾಡುಕೋಣದ ದಾಳಿಯ ಸ್ವರೂಪ ಘೋರವಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿದ ಜನ ತೋಟದಲ್ಲಿ ಜಮಾಯಿಸಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುತ್ತಿದ್ದಂತೆ ತಾಳ್ಮೆ ಕಳೆದುಕೊಂಡಿದ್ದ ಸ್ಥಳೀಯರು ವನ್ಯಮೃಗಗಳು ಹಾಗೂ ಮಾನವ ಸಂಘರ್ಷ ಆಗಾಗ ನಡೆಯುತ್ತಲೇ ಇದೆ. ಇದಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ. ನಮ್ಮನ್ನೇ ಸ್ಥಳಾಂತರಿಸಿ, ನಮ್ಮ ಜಮೀನುಗಳನ್ನು ಬಿಟ್ಟು ಹೋಗುತ್ತೇವೆ ಅದನ್ನು ಅರಣ್ಯವನ್ನಾಗಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಫಿನಾಡಲ್ಲಿ ಕಳೆದ ಆರು ತಿಂಗಳಲ್ಲಿ ನಾಲ್ಕೈದು ಜನ ಕಾಡಾನೆ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಯತೇಚ್ಛವಾಗಿ ಅರಣ್ಯ ಪ್ರದೇಶ ಹೊಂದಿರುವ ಕಾಫಿನಾಡ ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗ-ಮಾನವ ಸಂಘರ್ಷ ಹೊಸತು ಅಲ್ಲ. ಆದರೆ ಈ ರೀತಿ ಕಾಡುಕೋಣಕ್ಕೆ ಜೀವತೆತ್ತಿರೋದು ದುರಂತವಾಗಿದೆ. ಈ ಘಟನೆಯಿಂದ ಕಾಡಂಚಿನ ಗ್ರಾಮಗಳ ಜನರು ಬದುಕು ಹೇಗೆಂದು ಆತಂಕ ಶುರುವಾಗಿದೆ.












Click it and Unblock the Notifications