ಚಿಕ್ಕಮಗಳೂರು: ರಸ್ತೆ ನಿರ್ಮಿಸಿ ಮನೆ ಸೇರಿದ ಗುತ್ತಿಗೆದಾರ; ಕೊಡದಲ್ಲಿ ನೀರು ಹೊತ್ತು ಹಾಕಿದ ಗ್ರಾಮಸ್ಥ
ಚಿಕ್ಕಮಗಳೂರು, ಜನವರಿ 28: ಸರ್ಕಾರವು ಆ ಗ್ರಾಮದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿತ್ತು, ಕಾಂಟ್ರಾಕ್ಟರ್ ಕೂಡಾ ರಸ್ತೆಯನ್ನು ನಿರ್ಮಿಸಿದರು. ಆದರೆ ಕಾಂಕ್ರೀಟ್ ರಸ್ತೆ ಮಾಡಿ ಹೋದ ಕಂಟ್ರಾಕ್ಟರ್ ಮತ್ತೆ ಆ ರಸ್ತೆ ಕಡೆ ತಿರುಗಿ ನೋಡಲಿಲ್ಲ. ಇದನ್ನು ಕಂಡ ಗ್ರಾಮದ ವ್ಯಕ್ತಿಯೊಬ್ಬರು ತನ್ನೂರಿನ ರಸ್ತೆ ಉಳಿವಿಗಾಗಿ ಸತತ ಹತ್ತಾರು ದಿನಗಳ ಕಾಲ ತನ್ನದೇ ವಾಹನದಲ್ಲಿ ತನ್ನೂರಿನ ಮಕ್ಕಳನ್ನು ಕರೆದುಕೊಂಡು ರಸ್ತೆಗೆ ನೀರು ಹಾಕಿ ಸಾಮಾಜಿಕ ಕಳಕಳಿ ಮೆರೆಯುವ ಜೊತೆಗೆ ಮಕ್ಕಳಿಗೂ ಮಾದರಿಯಾಗಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಶಿರವಾಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಲು ಗ್ರಾಮದಿಂದ ಬೊಗಸೆಗದ್ದೆ ಪರಿಶಿಷ್ಟ ಕಾಲೊನಿಯವರೆಗೆ ಕಳೆದ ಕೆಲ ದಿನಗಳ ಹಿಂದೆ ಸರ್ಕಾರ ಪ್ರವಾಹದಿಂದ ಹಾನಿಯಾದ ರಸ್ತೆ ಕಾಮಗಾರಿಗೆ ಪ್ರಕೃತಿ ವಿಕೋಪದ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಹಣವನ್ನು ಮಂಜೂರು ಮಾಡಿತ್ತು.

ತನ್ನೂರಿನ ರಸ್ತೆ ಉಳಿಸಿಕೊಳ್ಳಲು ಮುಂದಾದ ನಂದೀಶ್
ಟೆಂಡರ್ ಪಡೆದ ಕಂಟ್ರಾಕ್ಟರ್ ಕೂಡಲೇ ಕಾಮಗಾರಿ ಪ್ರಾರಂಭ ಮಾಡಿ ರಸ್ತೆಯನ್ನು ಸಹ ನಿರ್ಮಾಣ ಮಾಡಿದರು. ಆದರೆ ಕಾಂಕ್ರಿಟ್ ರಸ್ತೆ ಕ್ಯೂರಿಂಗ್ ಮಾಡದೇ ರಸ್ತೆ ಮೇಲೆ ಅಡಿಕೆ ಸಿಪ್ಪೆ ಹರಡಿ ಅತ್ತ ತಿರುಗಿಯೂ ನೋಡಲಿಲ್ಲ. ಇದನ್ನು ಕಂಡ ಬೊಗಸೆಮನೆ ಗ್ರಾಮದ ನಂದೀಶ್ ಹಾಗೂ ಗ್ರಾಮದ ಮಕ್ಕಳು ರಸ್ತೆಗೆ ನೀರೆರೆದು ತನ್ನೂರಿನ ರಸ್ತೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಕೊಡದಲ್ಲಿ ನೀರು ಹೊತ್ತು, ಕಾಂಕ್ರೀಟ್ ರಸ್ತೆ ಕ್ಯೂರಿಂಗ್
ಮಾವಿನಕೊಲು ಗ್ರಾಮದಿಂದ ಬೊಗಸೆಗದ್ದೆ ಪರಿಶಿಷ್ಟ ಕಾಲೊನಿಯವರೆಗೆ 130 ಮೀಟರ್ ರಸ್ತೆಯನ್ನು ಮಾಡಿದ ಕಂಟ್ರಾಕ್ಟರ್, ಕಾಮಗಾರಿ ಬಳಿಕ ರಸ್ತೆ ಕಡೆ ತಿರುಗಿ ನೋಡಲಿಲ್ಲ. ಇದನ್ನು ಗಮನಿಸಿದ ಗ್ರಾಮದ ನಂದೀಶ್ ತನ್ನೂರಿನ ರಸ್ತೆ ಬಹುಕಾಲ ಉಳಿಯಲಿ ಎಂಬ ದೃಷ್ಟಿಯಿಂದ ಪ್ರತಿನಿತ್ಯ ರಸ್ತೆಗೆ ಕ್ಯೂರಿಂಗ್ ಆಗುವವರೆಗೆ ನೀರು ಹಾಕಿ ರಸ್ತೆ ಉಳಿಸಿಕೊಂಡಿದ್ದಾರೆ. ಕಾಮಗಾರಿ ಮಾಡಿ ಹಣ ಪಡೆದವರು ಮನೆಗೆ ಹೋದರೂ, ನಂದೀಶ್ ಮಾತ್ರ ಯಾವುದೇ ಫಲಾಪೇಕ್ಷೆ ಇಲ್ಲದೇ ತನ್ನೂರಿನ ರಸ್ತೆ ಉಳಿಸಿಕೊಳ್ಳುವ ಸಲುವಾಗಿ ಪ್ರತಿನಿತ್ಯ ತಮ್ಮ ವಾಹನದ ಮೂಲಕ ನೀರು ತಂದು ಮಕ್ಕಳೊಡಗೂಡಿ ಕೊಡದಲ್ಲಿ ರಸ್ತೆಗೆ ನೀರು ಹಾಕಿ ಮಾದರಿಯಾಗಿದ್ದಾರೆ.

ತನ್ನದೇ ವಾಹನದಲ್ಲಿ ನೀರು ಪೂರೈಕೆ
ಮಲೆನಾಡು ಭಾಗದಲ್ಲಿ ಒಂದು ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಎಷ್ಟು ಅಲೆಯಬೇಕು ಎಂಬುದು ಮಲೆನಾಡಿಗರಿಗೆ ಚೆನ್ನಾಗಿ ಗೊತ್ತು. ಈಗಲೂ ಮಲೆನಾಡು ಭಾಗದಲ್ಲಿ ಹಲವು ಗ್ರಾಮಗಳಿಗೆ ರಸ್ತೆ ಇಲ್ಲದಿರುವುದು ಕಂಡು ಬರುತ್ತದೆ. ಇದನ್ನು ಮನಗಂಡ ಗ್ರಾಮದ ನಂದೀಶ್ ನಮ್ಮೂರಿನಲ್ಲಿ ನಿರ್ಮಾಣವಾದ ರಸ್ತೆ ಉಳಿಸಿಕೊಳ್ಳಲು ತಾವೇ ಮುಂದಾಗಿ ತನ್ನದೇ ಓಮಿನಿ ವಾಹನದಲ್ಲಿ ಪ್ರತಿನಿತ್ಯ ಮೂರ್ನಾಲ್ಕು ಡ್ರಮ್‌ಗಳನ್ನು ಇಟ್ಟುಕೊಂಡು ತಮ್ಮ ಊರಿನ ಬೋರ್‍ವೆಲ್‍ನಲ್ಲಿ ನೀರು ತುಂಬಿಸಿಕೊಂಡು ಕ್ಯೂರಿಂಗ್ ಆಗುವ ವರೆಗೂ ಪ್ರತಿನಿತ್ಯ ಎರಡು ಬಾರಿ ರಸ್ತೆಗೆ ನೀರು ಹಾಕಿದ್ದಾರೆ. 130 ಮೀಟರ್ ರಸ್ತೆ ಉಳಿಸಲು ಐದಾರು ಟ್ರಿಪ್ ನೀರು ತೆಗೆದುಕೊಂಡು ಬಂದು ರಸ್ತೆ ಉಳಿವಿಗೆ ಮುಂದಾಗಿದ್ದಾರೆ.

ಗ್ರಾಮದ ಮಕ್ಕಳು ಸಾಥ್
ನಂದೀಶ್‍ಗೆ ಗ್ರಾಮದ ಮಕ್ಕಳು ಸಾಥ್ ನೀಡಿದ್ದಾರೆ. ಗ್ರಾಮದ ಹತ್ತಾರು ಮಕ್ಕಳು ಈ ಕಾರ್ಯದಲ್ಲಿ ನಂದೀಶ್‍ಗೆ ಸಾಥ್ ನೀಡಿದ್ದಾರೆ. ಪ್ರತಿನಿತ್ಯ ನೀರು ಹಾಕುವ ಸಮಯಕ್ಕೆ ಹಾಜರಾಗುವ ಮಕ್ಕಳು ದಿನನಿತ್ಯ ರಸ್ತೆಗೆ ನೀರು ಹಾಕಿ ರಸ್ತೆ ಉಳಿವಿನಲ್ಲಿ ಪಾಲುದಾರರಾಗಿದ್ದಾರೆ. ಈ ಮೂಲಕ ನಂದೀಶ್ ಮಕ್ಕಳ ಮೇಲೂ ಸಹ ಸಮಾಜದಲ್ಲಿ ಸಾರ್ವಜನಿಕ ಪಾತ್ರ ಹೇಗಿರಬೇಕು ಎಂಬ ಸಂದೇಶವನ್ನು ಸಾರುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.












Click it and Unblock the Notifications