ಮಟ ಮಟ ಮಧ್ಯಾಹ್ನವೇ ಅಬ್ಬರಿಸಿದ ವರುಣ: ಕಾಫಿನಾಡು ಈಗ ಕೂಲ್..ಕೂಲ್
ಚಿಕ್ಕಮಗಳೂರು, ಮೇ 07: ರಾಜ್ಯದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಂತೆ ಚಿಕ್ಕಮಗಳೂರಿನಲ್ಲಿ ಇಂದು ಮಧ್ಯಾಹ್ನವೇ ಧಾರಾಕಾರ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಇಂದು ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಳೆದೊಂದು ಗಂಟೆಯಿಂದ ನಿರಂತರ ಮಳೆಯಾಗುತ್ತಿದ್ದು, ಭಯಂಕರ ಮಳೆಯಿಂದ ಕಾದ ಕಾವಲಿಯಂತಾಗಿದ್ದ ಕಾಫಿನಾಡಿನ ಭೂಮಿ ತಂಪಾಗಿದೆ.

ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ನಿಂತಿದ್ದು, ಹೆಚ್ಚಿದ ಉಷ್ಣಾಂಶದಿಂದ ಕಂಗಾಲಾಗಿದ್ದ ಜನರು ಮಳೆಯಿಂದ ಸದ್ಯ ಸಂತಸಗೊಂಡಿದ್ದಾರೆ. ಇನ್ನು ಜಿಲ್ಲೆಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಗುಡುಗು ಸಹಿತ ಭಾರೀ ಮಳೆ ಮುಂದುವರಿದಿದೆ.
ರಾಜ್ಯದಲ್ಲಿ ಮೂರು ದಿನಗಳ ಕಾಲ ಭರ್ಜರಿ ಮಳೆ
ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿಯ ಪ್ರಭಾವದಿಂದ ದಕ್ಷಿಣ ಕರ್ನಾಟಕದಲ್ಲಿ ಮಳೆ ಆರಂಭವಾಗಿದ್ದು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಗುಡುಗು ಸಹಿತ ಉತ್ತಮ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಮೈಸೂರು, ಮಂಡ್ಯ, ಕೋಲಾರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಮೇ 7 ರಿಂದ 9ವರೆಗೆ ನಿರಂತರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ವರುಣ
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಮಳೆ ಆರಂಭವಾಗಿದ್ದು, ಮೇ 06 ಸೋಮವಾರ ಸಂಜೆ ಭರ್ಜರಿ ಮಳೆಯಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಇಡೀ ಗುಡುಗು ಸಹಿತ ಮಳೆಯಾಗಿದೆ. ನಗರದಲ್ಲಿ ಇದೇ ವಾತಾವರಣ ಮುಂದುವರಿಯಲಿದ್ದು, ಮೇ 10ರ ವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿ ಪ್ರಕಾರ ಮೇ 06 ಸೋಮವಾರ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ 39.5 ಮಿಮೀ ಮಳೆಯಾಗಿದ್ದು, ದಯಾನಂದ ನಗರದಲ್ಲಿ (32.5 ಮಿಮೀ) ಮಳೆಯಾಗಿದೆ. ಹಾಗೂ ನಗರದ 18 ವಾರ್ಡ್‌ಗಳಲ್ಲಿ 10 ಮಿಮೀಗೂ ಹೆಚ್ಚು ಮಳೆಯಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications