ಚಿಕ್ಕಮಗಳೂರಿನ ದತ್ತಪೀಠಕ್ಕೆ ಆಡಳಿತ ಮಂಡಳಿ ರಚನೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಚಿಕ್ಕಮಗಳುರು, ನವೆಂಬರ್, 18: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಮೂಲಕ ವಿವಾದಿತ ಕೇಂದ್ರವೂ ಆಗಿದ್ದ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ.
ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರ ಈ ಆಡಳಿತ ಮಂಡಳಿಗೆ ಇದೆ. ಆಡಳಿತ ಮಂಡಳಿಗೆ ಸದಸ್ಯರಾಗಲು 42 ಜನ ಅರ್ಜಿ ಸಲ್ಲಿಸಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿದ್ಯಾಭ್ಯಾಸ, ವಿಳಾಸ ಸೇರಿದಂತೆ ಒಟ್ಟಾರೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಶುಕ್ರವಾರ (ನವೆಂಬರ್ 18)ದಂದು ರಾಜ್ಯ ಸರ್ಕಾರ ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನು ನೇಮಕ ಮಾಡಿದೆ. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ಸೇರಿದಂತೆ ಆಡಳಿತ ಮಂಡಳಿಯಲ್ಲಿ ಒಟ್ಟು ಎಂಟು ಜನ ಸದಸ್ಯರಿದ್ದಾರೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ದತ್ತಪೀಠದಲ್ಲಿ ಪೂಜೆ ಹೇಗಿರಬೇಕು, ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರಬೇಕು, ಹಿಂದೂ-ಮುಸ್ಲಿಮರು ವಾರದಲ್ಲಿ ಯಾರು ಎಷ್ಟು ದಿನ ಪೂಜೆ ಮಾಡಬೇಕು. ಯಾರು ಮಾಡಬೇಕು ಎಂಬೆಲ್ಲಾ ಅಂಶಗಳ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಿದೆ.
ಸರ್ಕಾರದ ಅಂಕಿತದತ್ತ ಎಲ್ಲರ ಚಿತ್ತ
ಸರ್ಕಾರ ಆಡಳಿತ ಮಂಡಳಿಯ ಮನವಿಗೆ ಅಂಕಿತ ಹಾಕಿದರೆ ದತ್ತಪೀಠದಲ್ಲಿ ಇನ್ಮುಂದೆ ಹಿಂದೂ ಅರ್ಚಕರು ಪೂಜೆ ಮಾಡಲಿದ್ದಾರೆ. ಹಿಂದೂ ಅರ್ಚಕರ ನೇಮಕಕ್ಕೆ ಹಿಂದೂ ಸಂಘಟನೆಗಳ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಲಿದೆ. ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪಸಮಿತಿ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿತ್ತು. ಆಗ ಪೂಜಾ ಪದ್ಧತಿಯ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ದತ್ತಪೀಠದ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿದೆ.

ದತ್ತಮಾಲೆ ಅಭಿಯಾನಕ್ಕೆ ಶಾಂತಿಯುತ ತೆರೆ
ಮೊನ್ನೆಯಷ್ಟೇ ದತ್ತಪಾದುಕೆ ದರ್ಶನ ಪಡೆಯುವ ಮೂಲಕ ಶ್ರೀರಾಮಸೇನೆ ದತ್ತಮಾಲೆ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿತ್ತು. ದತ್ತಮಾಲೆ ಅಭಿಯಾನದ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ದತ್ತದೀಪೋತ್ಸವ, ಪಡಿಸಂಗ್ರಹ ಮತ್ತಿತರೆ ಧಾರ್ಮಿಕ ಕಾರ್ಯ ನಡೆಸಿ ನಗರದಲ್ಲಿ ಶೋಭಾಯಾತ್ರೆಯನ್ನು ನಡೆಸಿದ್ದರು. ಕಳೆದ ವರ್ಷ ನಿಷೇಧ ಹೇರಿದ್ದ ದತ್ತವಿಗ್ರಹವನ್ನು ಈ ಬಾರಿ ಶೋಭಾಯಾತ್ರೆಯಲ್ಲಿ ಕೊಂಡೊಯ್ಯಲು ಅವಕಾಶ ನೀಡಿದ್ದರಿಂದ ದತ್ತವಿಗ್ರಹದ ಮೆರವಣಿಗೆ ಎಂಜಿ ರಸ್ತೆಯಲ್ಲಿ ಸಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಯಿಂದ ಬಂದಿದ್ದ ದತ್ತಮಾಲಾಧಾರಿಗಳು ಕೇಸರಿ ಧ್ವಜ, ಕೇಸರಿ ವಸ್ತ್ರ ಧರಿಸಿ ಘೋಷಣೆ ಕೂಗಿದ್ದರು. ಆಜಾದ್ ವೃತ್ತದಲ್ಲಿ ಶೋಭಾಯಾತ್ರೆ ಸಮಾಪನಗೊಂಡು ಅಲ್ಲಿಂದ ವಿವಿಧ ವಾಹನಗಳಲ್ಲಿ ಗಿರಿಯತ್ತ ಕಾರ್ಯಕರ್ತರು ಪ್ರಯಾಣ ಬೆಳೆಸಿದರು. ಸ್ವಾಮೀಜಿಗಳ ನೇತೃತ್ವದಲ್ಲಿ ದತ್ತಪಾದುಕೆಗಳಿಗೆ ಹೂಹಾಕಿ ಪೂಜೆ ಸಲ್ಲಿಸಲಾಗಿತ್ತು. ಹೊರಾಂಗಣದಲ್ಲಿರುವ ತಾತ್ಕಾಲಿಕ ಮಂದಿರದಲ್ಲಿ ದತ್ತ ಹೋಮ, ಗಣಪತಿ ಹೋಮದ ಪೂರ್ಣಾಹುತಿ, ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂಬ ಆಗ್ರಹ ಕೇಳಿಬಂದುತ್ತು. ಇದೀಗ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications