ಕಾಂಗ್ರೆಸ್‌ನವರು ಬಿಜೆಪಿಯ ತಪ್ಪುಗಳನ್ನು ತೆರೆದಿಡುವ ಮೂಲಕ ಗೆದ್ದಿದ್ದಾರೆ ಅಷ್ಟೇ: ಪ್ರಜ್ವಲ್ ರೇವಣ್ಣ
ಚಿಕ್ಕಮಗಳೂರು, ಮೇ, 16: ಕಾಂಗ್ರೆಸ್ಸಿಗರು ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ, ಬಿಜೆಪಿಯ ತಪ್ಪುಗಳನ್ನು ತೆರೆದಿಡುವ ಮೂಲಕ ಗೆದ್ದಿದ್ದಾರೆ ಅಷ್ಟೆ ಎಂದು ಕಡೂರಿನ ಯಗಟಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್‌ನವರು ಬಿಜೆಪಿಯ ಮೀಸಲಾತಿ, ಹಿಜಾಬ್‌ನಂತಹ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ರಾಜ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಏನೇ ಮಾತನಾಡಿದರೂ ಕೂಡ ಅವರು ಹತಾಶೆಯ ಮಾತು ಅಂತಾರೆ. ಆದರೆ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 2,000 ರೂಪಾಯಿ, ಫ್ರೀ ಬಸ್, ಯುವಕರಿಗೆ ಸ್ಟೇ ಫಂಡ್, 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಕೊಟ್ಟ ಭರವಸೆಗಳನ್ನು ಮೊದಲು ಈಡೇರಿಸಬೇಕೆಂದು ಸವಾಲು ಹಾಕಿದರು.

ಜನರು ನಂಬಿಕೆ ಇಟ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದು, ಇದೀಗ ಜನರು ಭರವಸೆಗಳ ಹಾದಿಯನ್ನು ಕಾಯುತ್ತಿದ್ದಾರೆ. ಹಾಗೆಯೆ ಕಾಂಗ್ರೆಸ್‌ನವರು ಕೊಟ್ಟ ಮಾತನ್ನು ಉಳಿಸಿಕೊಂಡು ಹೇಗೆ ಸರ್ಕಾರ ನಿಭಾಯಿಸುತ್ತಾರೆಯೋ ಅನ್ನುವುದನ್ನು ಕಾದು ನೋಡೋಣ. ಸರ್ಕಾರ ಬಂದು 48 ಗಂಟೆಯೂ ಕಳೆದಿಲ್ಲ, ಮತ್ತೊಂದೆಡೆ ಹರಿಪ್ರಸಾದ್ ಈಗಲೇ ಯೂಟರ್ನ್ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಪಿಎಲ್ ಕಾರ್ಡ್ ಇರುವವರಿಗೆ, ತೆರಿಗೆ ಕಟ್ಟುವವರಿಗೆ ಈ ಸೌಲಭ್ಯಗಳು ಇಲ್ಲ. ಬದಲಾಗಿ ಬಿಪಿಎರ್ ಕಾರ್ಡ್ ಹೊಂದಿರುವವರಿಗೆ ಸೌಲಭ್ಯಗಳು ಸಿಗಲಿವೆ ಎಂದು ಯೂಟರ್ನ್ ಹೊಡೆಯುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು. ಒಟ್ಟಿನಲ್ಲಿ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಲಿ ಎಂದು ಹಾರೈಸೋಣ. ಈಗಲೇ ಚರ್ಚೆ ಬೇಡ, ಸರ್ಕಾರದ ನಿಜ ರೂಪ ಹೊರಬರಬೇಕು. ಎರಡು ತಿಂಗಳು ಕಳೆಯಲಿ. ಸಿಎಂ, ಸಚಿವರು ಎಲ್ಲರೂ ಪ್ರಮಾಣ ವಚನ ಸ್ವೀಕರಿಸಲಿ. ಅವರು ಕೊಟ್ಟ ಮಾತನ್ನು ಹೇಗೆ ಉಳಿಸಿಕೊಳ್ಳುತ್ತಾರೆ ನೋಡಿ ಚರ್ಚಿಸೋಣ ಎಂದರು.
ಕಾಫಿನಾಡಿನಲ್ಲಿ ದಲಿತ ಸಿಎಂ ಕೂಗು
ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಸಿಎಂ ಗದ್ದುಗೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಹಾಗೆಯೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಸಿಎಂ ಕೂಗು ಎದ್ದಿದೆ. 70 ವರ್ಷದಲ್ಲಿ ಕಾಂಗ್ರೆಸ್ ದಲಿತರಿಗೆ ಸಿಎಂ ಸ್ಥಾನವನ್ನು ನೀಡಿಲ್ಲ. ಆದ್ದರಿಂದ ಈ ಬಾರಿಯಾದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್‌ಗೆ ಸಿಎಂ ಪಟ್ಟ ಕಟ್ಟಬೇಕೆಂದು ನಗರದ ಆಜಾದ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಬೇಕು
ಅದೇ ರೀತಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಪ್ರಾರ್ಥಿಸಿ ದಾವಣಗೆರೆಯಲ್ಲಿ ಕುರುಬ ಸಮಾಜದ ಪ್ರಮುಖರು ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಈ ವೇಳೆ ಮಾತನಾಡಿದ ಕುರುಬ ಸಮಾಜದ ಅಧ್ಯಕ್ಷ ವೀರಣ್ಣ, ಎಲ್ಲಾ ಸಮಾಜಕ್ಕೆ ಬೇಕಾಗುವ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದಲ್ಲಿ ಎಲ್ಲಾ ಸಮಾಜದವರನ್ನು ತನ್ನ ಜೊತೆಗೆ ಕೊಂಡೊಯ್ದು ಸಮ ಸಮಾಜವನ್ನು ನಿರ್ಮಾಣ ಮಾಡಿದ ವ್ಯಕ್ತಿತ್ವ ಅವರದು. ಅಲ್ಲದೆ 13 ಬಾರಿ ಬಜೆಟ್ ಮಂಡನೆ ಮಾಡಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್‌ನ ವರಿಷ್ಠರು ಬೇರೆ ಯಾವುದೇ ಒಂದು ಜಾತಿಗೆ ಸೀಮಿತ ಆಗುವ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬಾರದು. ಬದಲಾಗಿ ಎಲ್ಲಾ ಸಮಾಜದ ವ್ಯಕ್ತಿ ಆಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ. ಆ ಮೂಲಕ ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದಿದ್ದರು.
ನಂತರ ಪಾಲಿಕೆಯ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಬಿ.ಗೋಣೆಪ್ಪ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ಇರುವುದು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ. ಅಲ್ಲದೆ 13 ಬಾರಿ ರಾಜ್ಯದ ಅಯವ್ಯಯವನ್ನು ಮಂಡಿಸಿರುವ ಹೆಗ್ಗಳಿಕೆ ಅವರಿಗಿದೆ. ಆದ್ದರಿಂದ ಅವರಿಗೆ ಆಡಳಿತ ಕೊಟ್ಟರೆ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ಹೇಳಿದ್ದರು.












Click it and Unblock the Notifications