YSV Datta Rejoin JDS : ಕಡೂರು: ಕೊನೆಗೂ ಮರಳಿ ಜೆಡಿಎಸ್ ಗೂಡಿಗೆ ಸೇರಿದ ವೈ.ಎಸ್.ವಿ ದತ್ತ
ಕಡೂರು, ಏಪ್ರಿಲ್, 13: ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದರಲ್ಲೂ ಕಡೂರೂ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೈ.ಎಸ್.ವಿ ದತ್ತ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ವೈ.ಎಸ್.ವಿ ದತ್ತ ಅವರು ಮರಳಿ ಜೆಡಿಎಸ್ ಗೂಡಿಗೆ ಸೇರಿದ್ದಾರೆ.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಗುರುವಾರ (ಏಪ್ರಿಲ್ 13) ಅಚ್ಚರಿಯ ಬೆಳವಣಿಗೆಯಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ದತ್ತ
ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕಡೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾದ ಅವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಕೈ ತಪ್ಪಿದ ಟಿಕೆಟ್: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಎಂ.ಪಿ.ಕುಮಾರಸ್ವಾಮಿ
ದತ್ತ ಜೊತೆ ದೇವೇಗೌಡರ ಮಾತುಕತೆ
ದತ್ತ ಅವರ ಅಸಮಾಧಾನದ ನಡೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡ ಅವರು, ದತ್ತ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದರ ಪರಿಣಾಮವಾಗಿ ಗುರುವಾರ ಯಗಟಿಯಲ್ಲಿರುವ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು ದತ್ತ ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ದತ್ತ ಅವರನ್ನು ಜೆಡಿಎಸ್‍ಗೆ ಬರುವಂತೆ ಮನವಿ ಮಾಡಿದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಿದ ವೈಎಸ್‍ವಿ ದತ್ತ, ಮಾಜಿ ಪ್ರಧಾನಿ ದೇವೇಗೌಡ ಮತ್ತು ತಮ್ಮ ನಡುವಿನ ಸಂಬಂಧ ತಂದೆ ಮಗನ ರೀತಿ ಇದೆ. ದೇವೇಗೌಡರ ಮನೆಯ ಬಾಗಿಲು ಬಡಿಯುವ ಆವಶ್ಯಕತೆ ತಮಗಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿ ಓಡಾಡುವ ಅವಕಾಶ ತಮಗಿದೆ. ಒಂದು ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಕಾಂಗ್ರೆಸ್ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದರು.
ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇಕೆ?
ಅಲ್ಲದೇ ಎರಡು ದೊಡ್ಡ ರಾಜಕೀಯ ಪಕ್ಷಗಳನ್ನು, ಅಲ್ಲಿನ ವ್ಯವಸ್ಥೆಯನ್ನು ಮಣಿಸಲು ಈ ಚುನಾವಣೆ ತಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಪಕ್ಷೇತರನಾಗಿ ಸ್ಫರ್ಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೆ. ಮಾಜಿ ಪ್ರಧಾನಿ ದೇವೇಗೌಡರ ಇಚ್ಛೆಯಂತೆ ಮರಳಿ ಗೂಡಿಗೆ ಬಂದಿದ್ದೇನೆ. ಹಾಗೂ ಕಾರ್ಯಕರ್ತರ ರಕ್ಷಣೆ ನನ್ನ ಹೊಣೆ ಎಂದು ಹೇಳಿದರು.
ಇನ್ನು ಎಚ್.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷವು ದತ್ತ ಅವರಂತೆ ಬಹಳಷ್ಟು ಜನರಿಗೆ ಟೋಪಿ ಹಾಕಿದೆ. ದತ್ತ ಅವರನ್ನು ಈ ಸಮಯದಲ್ಲಿ ಕೈ ಬಿಡುವುದು ಬೇಡ ಎಂಬ ದೇವೇಗೌಡರ ಸೂಚನೆಯಂತೆ ಇಲ್ಲಿಗೆ ನಾವು ಬಂದಿದ್ದೇವೆ. ಇಲ್ಲಿ ಸೇರಿರುವ ಎಲ್ಲಾ ಕಾರ್ಯಕರ್ತರು ಒಂದೇ ನಿರ್ಣಯದಿಂದ ದೇವೇಗೌಡರ ಆಸೆಯಂತೆ ದತ್ತ ಅವರನ್ನು ಬೆಂಬಲಿಸಬೇಕು. ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಅಷ್ಟೇ ಅಭಿಮಾನದಿಂದ ನೋಡಬೇಕು ಎಂದು ಮನವಿ ಮಾಡಿದರು.
ನಂತರವ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ದತ್ತ ಅವರು ನಂಬಿ ಮೋಸ ಹೋದ ಸ್ಥಿತಿಯಲ್ಲಿದ್ದಾರೆ. ಸ್ವಾಭಿಮಾನಿ ಜನರೂ ಕೂಡ ಮೊಸ ಹೋಗಿದ್ದಾರೆ. ಅಂತಹ ಕಾರ್ಯಕರ್ತರು ಮತ್ತು ನಾಯಕರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಇಂದು ಪುನಃ ದತ್ತ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗಿದೆ ಎಂದರು.
ಬೇಸರಗೊಂಡಿದ್ದ ವೈ.ಎಸ್.ವಿ ದತ್ತ
ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದ ವೈ.ಎಸ್.ವಿ ದತ್ತ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು. ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುವುದಾಗಿ ಕಡೂರಿನಲ್ಲಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಶಾಕ್ ನೀಡಿದ್ದರು.
ಅದೇ ವೇಳೆ ವೈ.ಎಸ್.ವಿ ದತ್ತ ಅವರು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಮತ ಮತ್ತು ಚುನಾವಣೆ ಖರ್ಚಿಗಾಗಿ ಹಣ ನೀಡಿ ಎಂದು ಕ್ಷೇತ್ರದ ಜನರ ಬಳಿ ಭಿಕ್ಷೆ ಬೇಡಿದ್ದು, ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿದ್ದಾರೆ. ಮತ್ತಷ್ಟು ಹಣವನ್ನು ಕೊಡುತ್ತೇವೆ ಅಂತಲೂ ಅಭಿಮಾನಿಗಳು ಭರವಸೆ ನೀಡಿದ್ದರು.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಸ್ವತಂತ್ರವಾಗಿ ನಿಲ್ಲುವಂತೆ ಅಭಿಮಾನಿಗಳು ಸೂಚನೆ ನೀಡಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ವೈ.ಎಸ್.ವಿ ದತ್ತ ಅವರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಇದೀಗ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿ ಕುತೂಹಲ ಮೂಡಿಸಿದ್ದಾರೆ.












Click it and Unblock the Notifications