ಕರ್ನಾಟಕ ಚುನಾವಣೆ: ಚಿಕ್ಕಮಗಳೂರು ಜಿಲ್ಲೆಯ ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ
ಚಿಕ್ಕಮಗಳೂರು, ಏಪ್ರಿಲ್ 3 : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.13ಕ್ಕೆ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಏ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದರು.

ಮೇ.10ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಏ.13ರಂದು ಮತಎಣಿಕೆ ನಡೆಯಲಿದೆ. ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ 1,222 ಮತಗಟ್ಟೆಗಳನ್ನು ತರೆಯಲಿದ್ದು, 9,60,468 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದ ಅವರು, ಪಟ್ಟಣ ಪ್ರದೇಶದಲ್ಲಿ 316 ಮತಗಟ್ಟೆಗಳು, ಗ್ರಾಮೀಣ ಪ್ರದೇಶದಲ್ಲಿ 906 ಮತಗಟ್ಟೆಗಳನ್ನು ತೆರೆಯಲು ಈಗಾಗಲೇ ಗುರುತಿಸಲಾಗಿದೆ ಎಂದು ಹೇಳಿದರು.
195 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ರಾಜ್ಯಮಟ್ಟದ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ ಪರಿಶೀಲಿಸಿ ಘೋಷಿಸಲಿದ್ದಾರೆ. ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಶೃಂಗೇರಿ ಕ್ಷೇತ್ರದಲ್ಲಿ 82,688 ಪುರುಷರು, 85875 ಮಹಿಳೆಯರು ಇತರೆ 17 ಸೇರಿದಂತೆ ಒಟ್ಟು 1,68,564 ಮತದಾರರಿದ್ದಾರೆ ಎಂದು ಹೇಳಿದರು.

ಮೂಡಿಗೆರೆಯಲ್ಲಿ ಒಟ್ಟು 170551 ಮತದಾರರಿದ್ದು, ಪುರುಷರು 83419, ಮಹಿಳೆಯರು 87126 ಇತರೆ 1 ಮತದಾರರನ್ನು ಕ್ಷೇತ್ರ ಹೊಂದಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 1,11,484 ಪುರುಷ, 1,13,935 ಮಹಿಳೆಯರು, ಇತರೆ 6 ಮಂದಿ ಸೇರಿದಂತೆ ಒಟ್ಟು 2,25,437 ಮತದಾರರಿದ್ದಾರೆ. ತರೀಕೆರೆಯಲ್ಲಿ 95,306 ಪುರುಷರು, 96,306 ಮಹಿಳೆಯರಾದಿಯಾಗಿ ಇತರೆ 1 ಸೇರಿದಂತೆ ಒಟ್ಟು 1,91,445 ಮತದಾರರನ್ನು ಕ್ಷೇತ್ರಹೊಂದಿದೆ ಕಡೂರು ಕ್ಷೇತ್ರ ದಲ್ಲಿ 102,572 ಪುರುಷರು, 101,893 ಮಹಿಳೆಯರು ಇತರೆ 6 ಸೇರಿದಂತೆ ಒಟ್ಟು 2,04,471 ಮತದಾರರಿದ್ದಾರೆ ಎಂದು ತಿಳಿಸಿದರು.
ಶೃಂಗೇರಿಯಲ್ಲಿ 3,015, ಮೂಡಿಗೆರೆ 2,253, ಚಿಕ್ಕಮಗಳೂರು 3,520, ತರೀಕೆರೆ 2,894 ಕಡೂರು ಕ್ಷೇತ್ರದಲ್ಲಿ 3,114 ಯುವ ಮತದಾರರಿದ್ದಾರೆ. 80ವರ್ಷ ಮೇಲ್ಪಟ್ಟವರು 26,406 ಮತದಾರರಿದ್ದಾರೆ. ಶೃಂಗೇರಿಯಲ್ಲಿ 4,882, ಮೂಡಿಗೆರೆ 3,741, ಚಿಕ್ಕಮಗಳೂರು 6,230, ತರೀಕೆರೆ 5,857, ಕಡೂರಿನಲ್ಲಿ 5,696 ಮತದಾರರಿದ್ದರೆ ಎಂದರು.
ಕಲಚೇತನರು ಪುರುಷ 5,588, ಮಹಿಳೆಯರು 4,020 ಇತರೆ ಒಬ್ಬರು ಸೇರಿದಂತೆ ಒಟ್ಟು 9,609 ಮತದಾರರಿ ದ್ದಾರೆ. 80ವರ್ಷ ಮೀರಿದ ವಿಕಲಚೇತನರಿಗೆ, ಕೋವಿಡ್ ಸೋಂಕಿತರಿಗೆ ಅಥವಾ ಬಾಧಿತ ವ್ಯಕ್ತಿಗಳಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿದ್ದು, ಅಂಚೆ ಮೂಲಕ ಮತ ಚಲಾಯಿಸಲು ಇಚ್ಚಿಸುವವರು ಕ್ಷೇತ್ರ ಚುನಾವನಾಧಿಕಾರಿಗೆ ಅರ್ಜಿಸಲ್ಲಿಸ ಬೇಕು. ಹೆಚ್ಚಿನ ಮಾಹಿತಿಯನ್ನು ಕ್ಷೇತ್ರದ ಬಿಎಲ್‍ಓಗಳಿಂದ ಪಡೆಯಬಹುದಾಗಿದೆ ಎಂದರು.
18 ವರ್ಷ ತುಂಬುತ್ತಿರುವ 596 ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. ಮತದಾರರ ಪಟ್ಟಿಗೆ ಸೇರ್ಪಡೆಯಾಗದಿರುವ ಹಾಗೂ ಹೆಸರು ಬಿಟ್ಟು ಹೋಗಿರುವವರು ಏ.10ರೊಳಗೆ ಮತದಾರರ ಪಟ್ಟಿಗೆ ಸರ್ಪೇಡೆಗೊಳ್ಳಲು ಅವಕಾಶವಿದೆ. ಮಹಿಳೆಯರಿಗೆ ಮತ್ತು ದಿವ್ಯಾಂಗರಿಗೆ ಪ್ರತ್ಯೇಕ ಮತಗಟ್ಟೆ, ಮಹಿಳಾ ಮತಗಟ್ಟೆ ಯಲ್ಲಿ ಪೊಲೀಸ್, ಭದ್ರತಾ ಸಿಬ್ಬಂದಿ ಸೇರಿದಂತೆ ಚುನಾವಣಾ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ ಎಂದರು.
ಚುನಾವಣಾ ಆಯೋಗವು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗಾಗಿ ಈ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು, ಇದು ಚುನಾವಣಾ ಅಭ್ಯರ್ಥಿಗಳ ಅಪರಾಧ ಹಿನ್ನಲೆ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಷನ್ ಹಾಗೂ ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಸುವಿಧಾ ಪೋರ್ಟಲ್ ಇದು ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಆನ್‍ಲೈನ್ ನಾಮನಿರ್ದೇಶನ, ಅನುಮತಿ ಸೇರಿದಂತೆ ಇತರೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.












Click it and Unblock the Notifications