ಕಡೂರು: ವೈ.ಎಸ್.ವಿ ದತ್ತಾ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿ
ಚಿಕ್ಕಮಗಳೂರು, ಜನವರಿ, 05: ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದು ತಂದೆ ಮಕ್ಕಳ ಸಂಬಂಧ ಆಗಿದೆ. ನಾನು ಎಲ್ಲೇ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ. ಹಾಗೆಯೇ ಜನವರಿ 15ರ ಬಳಿಕ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಕಡೂರು ತಾಲೂಕಿನ ಯಗಟಿಯಲ್ಲಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸ್ವಗ್ರಾಮ ಯಗಟಿಯಲ್ಲಿ ಮಾತನಾಡಿದ ಅವರು, ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವಾಗಿದೆ. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಇದನ್ನ ಅವರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ, ದೇವೇಗೌಡರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಆಗಿದೆ ಎಂದು ಹೇಳುವ ಮೂಲಕ ಭಾವುಕರಾದರು.
ನಿರಂತರ ಜನರ ಸಂಪರ್ಕದಲ್ಲಿದ್ದೇನೆ
ಕಡೂರಿನಲ್ಲಿ ನಿರಂತರ ಜನರ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಿಂದಲೂ ತಾಲೂಕಿನಲ್ಲಿ ಎಲ್ಲೇ ಹೋದರೂ ಕಾಂಗ್ರೆಸ್ ಸೇರಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಹಾಗಾಗಿ, ಜನಾಭಿಪ್ರಾಯ, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದ್ದು, ಜನವರಿ 15ರಂದು ಪಕ್ಷಕ್ಕೆ ಸೇರುವುದಾಗಿ ಸೂಚಿಸಿದ್ದಾರೆ. ಅಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ವಾಜಪೇಯಿ ಅವರು ಭಾವುಕ ಜೀವಿ
ಇನ್ನು ಅಟಲ್ ಬಿಹಾರ್ ವಾಜಪೇಯಿ ಅವರನ್ನು ಅಜಾತ ಶತ್ರು ಎಂದು ಕರೆಯುತ್ತಿದ್ದರು. ರಾಷ್ಟ್ರೀಯ ಹಿತದ ಜೊತೆಗೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಜಪೇಯಿ ಅವರ ವ್ಯಕ್ತಿತ್ವವನ್ನು ಹೊಗಳಿದ್ದರು. ಇತ್ತೀಚೆಗಷ್ಟೇ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಅಟಲ್ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಿ.ಟಿ.ರವಿ, ಅಟಲ್ ಬಿಹಾರ್ ವಾಜಪೇಯಿ ಅವರ ಮನಸ್ಸು ಹೂವಿನಷ್ಟು ಮೃಧುವೂ ಹೌದು, ವಜ್ರದಷ್ಟು ಕಠಿಣವೂ ಹೌದು ಎನ್ನುವಂತಿತ್ತು ಅವರ ಸ್ವಭಾವ. ಅವರು ಭಾವುಕ ಜೀವಿ ಎಂದು ತಿಳಿಸಿದ್ದರು.

ಆತ್ಮವಿಶ್ವಾಸದಿಂದ ಮಾತನಾಡಬೇಕು
ನುಡಿದರೆ ಮಾತು ಮುತ್ತಿನಂತೆ ಇರಬೇಕು ಎನ್ನುವಂತೆ ಹೃದಯ ಭಾವ ತುಂಬಿ ಮಾತನಾಡುತ್ತಿದ್ದರು. ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವ ಮೋರ್ಚಾ ವಾಜಪೇಯಿ ಜನ್ಮ ದಿನವನ್ನು ನೆಪವಾಗಿಟ್ಟುಕೊಂಡು ಅಟಲ್ ಭಾಷಣ ಸ್ಪರ್ಧೆ ಏರ್ಪಡಿಸಿದೆ. ಮಾತನಾಡುವವರು ವಿಷಯವನ್ನು ಗ್ರಹಿಸಿಕೊಂಡು ಆತ್ಮವಿಶ್ವಾಸದಿಂದ ಮಾತನಾಡಬೇಕು. ಕೇವಲ ಹುರುಹೊಡೆದು ಮಾತನಾಡುವುದಲ್ಲ. ಅನುಭವಿಸಿ ಮಾತನಾಡಬೇಕು. ನಾವು ಅಧ್ಯಯನ ಮಾಡಿದಾಗ ಅನುಭವಿಸಿ ಮಾತನಾಡಲು ಸಾಧ್ಯ. ಅದರ ಮೂಲಕ ನಾಯಕತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.












Click it and Unblock the Notifications