Rain Alert: ಚಿಕ್ಕಮಗಳೂರು ಸೇರಿ ರಾಜ್ಯದ ಹಲವೆಡೆ ಮುಂದುವರೆದ ಮಳೆ ಅಬ್ಬರ!
ಚಿಕ್ಕಮಗಳೂರು ಅಕ್ಟೋಬರ್ 1: ಅಕ್ಟೋಬರ್ ತಿಂಗಳ ಆರಂಭಕ್ಕೂ ಮುನ್ನ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ದಿನ ಧಾರಾಕಾರವಾಗಿ ಆರಂಭವಾದ ಮಳೆ ಇಂದು ಕೂಡ ಅಬ್ಬರಿಸಿದೆ. ಕಳೆದೊಂದು ತಿಂಗಳಿಂದ ಬಹುತೇಕ ಬಿಡುವ ನೀಡಿದ್ದ ವರುಣದೇವ ಆಗಾಗ್ಗೆ 10-20 ನಿಮಿಷಗಳ ಸಾಧಾರಣ ಮಳೆಯೊಂದಿಗೆ ಧರೆಗಿಳಿಯುತ್ತಿದ್ದನು. ಆದರೆ ಸೋಮವಾರ ಮಧ್ಯಾಹ್ನದ ನಂತರ ಶುರುವಾದ ಮಳೆ ಅರ್ಭಟ ಇಂದಿಗೂ ಮುಂದುವರೆದಿದೆ.
ಕಾಫಿ ಹಣ್ಣಾಗುವ ಸಮಯದಲ್ಲಿ ಈ ಭಾರಿಯ ಗಾಳಿ-ಮಳೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಮಾಡಿದೆ. ಧಾರಾಕಾರ ಮಳೆಯಿಂದಾಗಿ ಹಣ್ಣಿಗೆ ಬಂದಿರುವ ಕಾಫಿ ಉದುರುವ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಅಲ್ಲದೆ ದಿಢೀರ್ ಆರಂಭಗೊಂಡ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ, ಸುತ್ತಮುತ್ತ ಜೋರು ಮಳೆಯಾಗುತ್ತಿದೆ.

ಸೇತುವೆ ಜಲಾವೃತ
ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಜಲಾವೃತಗೊಂಡಿದೆ. ಇದರಿಂದಾಗಿ ಕಳಸ-ಬಾಳೆಹೊನ್ನೂರು ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ಹೀಗಾಗಿ ಹೊರನಾಡು ಮಾರ್ಗದಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಕಳೆದ ದಿನ ಮಧ್ಯಾಹ್ನದಿಂದ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಮಳೆ ನೀರು ಸೇತುವೆ ಮೇಲೆ 2 ಅಡಿ ಎತ್ತರದಲ್ಲಿ ಹರಿಯುತ್ತಿದೆ. ಅಲ್ಲದೆ ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಕಾಫಿ ಬೆಳೆಗಾರರು ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ.

ಸುಂಕಸಾಲೆ ಗ್ರಾಮದಲ್ಲಿ ಆಲಿಕಲ್ಲು ಮಳೆ
ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರದೊಂದಿಗೆ ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಆಲಿಕಲ್ಲು ಮಳೆ ಸುರಿದಿದೆ.
ಅಕ್ಟೋಬರ್ ನಲ್ಲಿ ಆಲಿಕಲ್ಲು ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಆಲಿಕಲ್ಲು ಮಳೆಯಿಂದ ಕಾಫಿಗೆ ಹಾನಿಯಾಗುವ ಆತಂಕವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬೆಳೆಗಾರರು ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಚಿಕ್ಕೋಡಿಯಲ್ಲಿ ಸಿಡಿಲಿಗೆ ವ್ಯಕ್ತಿ ಸಾವು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಗೇರಿ ಗ್ರಾಮದಲ್ಲಿ ಭೀಮಪ್ಪ ಭಾಳಪ್ಪ ಎಂಬಾತ ಸಿಡಿಲುಬಡಿದು ಸಾವನ್ನಪ್ಪಿದ್ದಾನೆ. ದನ ಕಾಯುತ್ತಿದ್ದ ವೇಳೆ ಸೋಮವಾರ ಸಂಜೆ ಮಳೆ ಗಾಳಿಗೆ ಸಿಡಿಲು ಬಡಿದು ಭೀಮಪ್ಪ ಭಾಳಪ್ಪ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸಿಡಿಲಿನ ಹೊಡೆತಕ್ಕೆ ಜೈನ ಸಮುದಾಯ ಬಸದಿ ಶಿಖರಕ್ಕೂ ಹಾನಿಯಾಗಿದೆ.
ಇನ್ನೂ ಜಮೀನಿನಲ್ಲಿ ಕೆಲ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ದುರಗಪ್ಪ ಮೃತ ದುರ್ದೈವಿ. ರಾಯಚೂರಿನ ಲಿಂಗಸ್ಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಹಳ ದಿನಗಳ ನಂತರ ಜಿಲ್ಲಾದ್ಯಂತ ವ್ಯಾಪಕ ಹದ ಮಳೆಯಿಂದ ಹಿಂಗಾರು ಪ್ರವೇಶ ಭರವಸೆ ಮೂಡಿಸಿದೆ. ಈಗಾಗಲೇ ಕೆಲವೆಡೆ ಸುಗ್ಗಿ ಆರಂಭವಾಗಿದೆ. ಭಾನುವಾರ ತಡ ರಾತ್ರಿಯಿಂದ ಆರಂಭವಾಗಿ ಮುಂಜಾನೆ ಐದು ಗಂಟೆಯವರೆಗೂ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ.
ಸಿಲಿಕಾನ್ ಸಿಟಿಯಲ್ಲಿ ಕೊಂಚ ರಿಲೀಫ್ ಕೊಟ್ಟಿದ್ದ ವರಣ ಭಾನುವಾರ ಮತ್ತೆ ಧರೆಗಿಳಿಯಲು ಶುರು ಮಾಡಿದ್ದಾನೆ. ಕರಾವಳಿಯಲ್ಲೂ ಮಳೆ ಅರ್ಭಟ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುದ್ದಿದೆ.
ಮುಂದಿನ ಮೂರ್ನಾಲ್ಕು ದಿನ ಎಲ್ಲೆಲ್ಲಿ ಯಾವಾಗ ಮಳೆ ಸೂಚನೆ?
ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆತಾಗುವ ಸಾಧ್ಯತೆ ಇದೆ. ಉಡುಪಿ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ ಒಂದು ವಾರ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.












Click it and Unblock the Notifications