Karnataka elections 2023: ಕಡೂರಿನಲ್ಲಿ ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುದಾಗಿ ಘೋಷಿಸಿದ ವೈ.ಎಸ್.ವಿ ದತ್ತ
ಚಿಕ್ಕಮಗಳೂರು, ಏಪ್ರಿಲ್, 09: ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದ ವೈ.ಎಸ್.ವಿ ದತ್ತ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುವುದಾಗಿ ಕಡೂರಿನಲ್ಲಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.
ಚುನಾವಣೆ ಖರ್ಚಿಗಾಗಿ ಹಣದ ಭಿಕ್ಷೆ
ಇದೇ ವೇಳೆ ವೈ.ಎಸ್.ವಿ ದತ್ತ ಅವರು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಮತ ಮತ್ತು ಚುನಾವಣೆ ಖರ್ಚಿಗಾಗಿ ಹಣ ನೀಡಿ ಎಂದು ಕ್ಷೇತ್ರದ ಜನರ ಬಳಿ ಭಿಕ್ಷೆ ಬೇಡಿದ್ದು, ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿದ್ದಾರೆ. ಮತ್ತಷ್ಟು ಹಣವನ್ನು ಕೊಡುತ್ತೇವೆ ಅಂತಲೂ ಅಭಿಮಾನಿಗಳು ಹೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಸ್ವತಂತ್ರವಾಗಿ ನಿಲ್ಲುವಂತೆ ಅಭಿಮಾನಿಗಳು ಸೂಚನೆ ನೀಡಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ವೈ.ಎಸ್.ವಿ ದತ್ತ ಅವರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೇಲಿಂದ ಮೇಲೆ ಬಂಡಾಯದ ಸಭೆ
ಇನ್ನು ವೈ.ಎಸ್.ವಿ.ದತ್ತಾಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅವರ ಮನೆಯಲ್ಲಿ ಅಭಿಮಾನಿಗಳು ಮೇಲಿಂದ ಮೇಲೆ ಬಂಡಾಯದ ಸಭೆಯನ್ನು ಮಾಡುತ್ತಲೇ ಇದ್ದರು. ಇದನ್ನು ಕಂಡಂತಹ ಜಿಲ್ಲೆಯ ಕಡೂರು ಅಭ್ಯರ್ಥಿ ಕೆ.ಎಸ್.ಆನಂದ್‍ಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಕಾಂಗ್ರೆಸ್‌ನ ಎರಡನೇ ಪಟ್ಟಿ ಘೋಷಣೆ ಆದಾಗಿನಿಂದಲೂ ದತ್ತ ಅವರ ಮನೆಯಲ್ಲಿ ಅಭಿಮಾನಿಗಳು ಮೇಲಿಂದ ಮೇಲೆ ಸಭೆ ಮಾಡುತ್ತಲೇ ಇದ್ದರು.
ಅಭಿಮಾನಿಗಳನ್ನು ಸಮಾಧಾನ ಮಾಡಿದ್ದ ದತ್ತ
ಇನ್ನು ಗುರುವಾರ ಸಂಜೆ ಬೆಂಗಳೂರಿನಿಂದ ಕಡೂರಿಗೆ ಬಂದ ಮಧ್ಯರಾತ್ರಿ 2 ಗಂಟೆಯವರೆಗೂ ಅಭಿಮಾನಿಗಳನ್ನು ಸಮಾಧಾನ ಮಾಡಿದ್ದಾರೆ. ಭಾನುವಾರ ( ಏಪ್ರಿಲ್ 09) ಕಡೂರಿನ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಬಹಿರಂಗ ಸಭೆಯನ್ನು ಕರೆಯಲಾಗಿತ್ತು. ಇದೇ ವೇಳೆ ದತ್ತ ಅವರು ಅಭಿಮಾನಿಗಳು ಹೇಗೆ ಹೇಳುತ್ತಾರೋ ಹಾಗೆ ಎಂದು ಎಲ್ಲವನ್ನೂ ಅಭಿಮಾನಿಗಳ ಮೇಲೆ ಹಾಕಿದ್ದರು.

ಶನಿವಾರ (ಏಪ್ರಿಲ್ 08) ರಾತ್ರಿಯೂ ಸಾವಿರಾರು ಅಭಿಮಾನಿಗಳು ಸಭೆ ಸೇರಿ ನೀವು ಸ್ವತಂತ್ರವಾಗಿ ಸ್ಪರ್ಧಿಸಲೇಬೇಕು ಎಂದು ದತ್ತ ಅವರ ಮೇಲೆ ಒತ್ತಡ ಹಾಕಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಟಿಕೆಟ್ ಕೈತಪ್ಪುತ್ತಿದ್ದಂತೆಯೇ ಭಾವನಾತ್ಮಕ ಪತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ದತ್ತ ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿ ಕಾದು ನೋಡುವ ತಂತ್ರ ಅನುಸರಿಸಿದ್ದರು.
ಅಭಿಮಾನಗಳು ಕೂಡ ಸ್ವತಂತ್ರವಾಗಿ ಸ್ಪರ್ಧಿಸಲು ಸಲಹೆ ನೀಡಿದ್ದರು. ಆದರೆ, ನಿತ್ಯ ದತ್ತ ಅವರ ಮನೆಯಲ್ಲಿ ಸಾವಿರಾರು ಅಭಿಮಾನಿಗಳು ಸಭೆ ನಡೆಸುತ್ತಿರುವುದರಿಂದ ಕಡೂರಿನ ಕಾಂಗ್ರೆಸ್ ಅಭ್ಯರ್ಥಿಗೆ ಆನಂದ್ ಆತಂಕಗೊಂಡಿದ್ದರು. ದತ್ತ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಮುಲಾಜಿಲ್ಲದೆ ಕಾಂಗ್ರೆಸ್‍ಗೆ ಮುಳ್ಳಾಗುವುದು ಗ್ಯಾರಂಟಿ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಇದು ಕಾಂಗ್ರೆಸ್ ಹೈಕಮಾಂಡ್‌ನ ವರಿಷ್ಟರು ಹಾಗೂ ಕಡೂರು ಅಭ್ಯರ್ಥಿಗೆ ಚಿಂತೆಗೀಡು ಮಾಡಿತ್ತು.
ಕಾಂಗ್ರೆಸ್ ಹೈಕಮಾಂಡ್‍ಗೆ ಕಾಫಿನಾಡು ಚಿಕ್ಕಮಗಳೂರು ಕೊಟ್ಟಷ್ಟು ತಲೆನೋವನ್ನು ಬಹುಶಃ ಯಾವ ಜಿಲ್ಲೆಯೂ ಕೊಟ್ಟಿಲ್ಲ. ಒಂದೆಡೆ ಸಿ.ಟಿ.ರವಿಯ ವಿರುದ್ಧದ ಅಭ್ಯರ್ಥಿ ಯಾರು ಅನ್ನುವ ಪ್ರಶ್ನೆ ಇದ್ದರೆ. ಮತ್ತೊಂದೆಡೆ ದತ್ತ ಅವರನ್ನು ಹೇಗೆ ಸುಮ್ಮನಾಗಿಸುವುದು ಅನ್ನುವ ಮಾತುಗಳು ಕೂಡ ಕೇಳಿಬಂದಿದ್ದವು.
ಟಿಕೆಟ್ ವಂಚಿತ ದತ್ತ ಸ್ವಾಭಿಮಾನದ ಹೆಸರಿನಲ್ಲಿ ಅಭಿಮಾನಿಗಳ ಜೊತೆ ಬಹಿರಂಗ ಸಭೆ ನಡೆಸಿರುವುದು ಕೂಡ ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅತ್ತ ತರೀಕೆರೆಯಲ್ಲಿ ಟಿಕೆಟ್ ಘೋಷಣೆಯೇ ಆಗಿಲ್ಲ. ಆದರೂ ಕೂಡ ಈಗಾಗಲೇ ಲಿಂಗಾಯತ ಸಮಯದಾಯದವರು ಟಿಕೆಟ್ ನೀಡುವಂತೆ ಬೀದಿಗಿಳಿದಿದ್ದಾರೆ.
ಕಾಂಗ್ರೆಸ್‍ಗೆ ಕಾಫಿನಾಡಿನಲ್ಲಿ ಕಬ್ಬಿಣದ ಕಡಲೆ ಆಗಿರೋದಂತೂ ಸತ್ಯ. ಅದರಲ್ಲೂ ಸಿ.ಟಿ.ರವಿ, ವೈ.ಎಸ್.ವಿ.ದತ್ತ ಎಂಬ ಎರಡು ಹೆಸರುಗಳು ಹೈಕಮಾಂಡ್‌ಗೆ ಮತ್ತಷ್ಟು ದಿಗಿಲು ತರಿಸಿತ್ತು. 2ನೇ ಪಟ್ಟಿಗೆ ಕಾಂಗ್ರೆಸ್ ಕೋಟೆ ಅತಂತ್ರಗೊಂಡಿದೆ. ಇನ್ನು 3ನೇ ಪಟ್ಟಿ ಬಿಡುಗಡೆಯಾದರೆ ಅಲ್ಲೋಲ-ಕಲ್ಲೋಲ ಆಗುವುಂತೂ ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬರುತ್ತಿವೆ. 120 ಪ್ಲಸ್ ಕನಸು ಕಾಣುತ್ತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಂಬ ಜೋಡೆತ್ತುಗಳು ಎಲ್ಲವನ್ನೂ ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆಯೋ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications