Monsoon Rain: ಕಾಫಿನಾಡಿನ ಜನರ ನಿದ್ದೆಗೆಡಿಸಿದ ಮಳೆರಾಯ, ಅವಾಂತರಗಳು ಒಂದಲ್ಲ, ಎರಡಲ್ಲ
ಚಿಕ್ಕಮಗಳೂರು, ಜುಲೈ, 23: ಈಗಾಗಲೇ ಒಂದು ವಾರದಿಂದಲೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದೆ. ಅದೇ ರೀತಿ ಇದೀಗ ಭಾರೀ ಮಳೆಯಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿವೆ.
ಮಳೆರಾಯನ ಆರ್ಭಟದಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕಳಸ-ಹೊರನಾಡು ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ಮಳೆಯಿಂದ ಹತ್ತಾರು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ಇಲ್ಲಿನ ಜನರು 8-10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಹೀಗೆ ಭಾರೀ ಗಾಳಿ-ಮಳೆಯೊಂದಿಗೆ ಸುರಿಯುತ್ತಿರುವ ಮಳೆಗೆ ಮಲೆನಾಡಿಗರು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ.
ಹೆದ್ದಾರಿಯಲ್ಲಿ ಉರುಳಿಬಿದ್ದ ಬೃಹತ್ ಮರ
ಮತ್ತೊಂದೆಡೆ ವಸ್ತಾರೆ ಬಳಿ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ಉರುಳಿಬಿದ್ದು, ಕಡೂರು-ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ. ಆದ್ದರಿಂದ ಈ ಹೆದ್ದಾರಿಯಲ್ಲಿ ವಾಹನಗಳು ಸಾಲಾಗಟ್ಟಿ ನಿಂತಲ್ಲೇ ನಿಂತಿವೆ. ಇನ್ನು ಆಲ್ದೂರು ಮೂಲಕ ಮೂಡಿಗೆರೆ, ಮಂಗಳೂರು ಕಡೆಯ ವಾಹನಗಳು 20 ಕಿ.ಮೀ. ಸುತ್ತಿಕೊಂಡು ಸಂಚಾರ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ.
ಮುರಿದು ಬಿದ್ದ ಬೃಹತ್ ಮರ, ತೋಟ ನಾಶ
ಮಳೆ-ಗಾಳಿ ಅಬ್ಬರಕ್ಕೆ ಅಡಿಕೆ ತೋಟದಲ್ಲಿದ್ದ ಬೃಹತ್ ಮರವೊಂದು ಮುರಿದು ಬಿದ್ದು 50 ಅಡಿಕೆ ಮರ ನಾಶವಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ನಡೆದಿದೆ. ನಾಗೇಶ್ ಎಂಬುವರಿಗೆ ಸೇರಿದ ಅಡಿಕೆ ತೋಟ ಇದಾಗಿದೆ.
ಇನ್ನು ಅಡಿಕೆ ಮರಗಳ ನಾಶದಿಂದ ತೋಟದ ಮಾಲೀಕ ನಾಗೇಶ್ ಕಂಗಲಾಗಿದ್ದಾರೆ. ಇನ್ನು ಎರಡು ದಿನದ ಹಿಂದೆಯೂ ತೋಟದಲ್ಲಿ ಬೃಹತ್ ಮರ ಬಿದ್ದು ಬಾಳೆ ಗಿಡಗಳು ಹಾನಿಯಾಗಿದ್ದವು. ಈಗ 50 ಅಡಿಕೆ ಮರಗಳನ್ನು ಕಳೆದುಕೊಂಡ ತೋಟದ ಮಾಲೀಕ ಕಣ್ಣೀರಿಟ್ಟಿದ್ದಾರೆ.
ಉಕ್ಕಿ ಹರಿಯುತ್ತಿರುವ ತುಂಗಾ ನದಿ
ಹಾಗೆಯೇ ಶೃಂಗೇರಿಯಲ್ಲಿರುವ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಇಲ್ಲಿನ ಗಾಂಧಿ ಮೈದಾನ ಜಲಾವೃತವಾಗಿದೆ. ಪಟ್ಟಣದ ಪ್ಯಾರಲಾಲ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆಯಾಗಿದೆ. ಇನ್ನು ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶೃಂಗೇರಿ ದೇವಾಲಯದ ಗಾಂಧಿ ಮೈದಾನದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಈಗಲೂ ಕ್ಷಣ ಕ್ಷಣಕ್ಕೂ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.












Click it and Unblock the Notifications