ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮುಂದುವರಿದ ಮಳೆರಾಯನ ಆರ್ಭಟ
ಚಿಕ್ಕಮಗಳೂರು, ಏಪ್ರಿಲ್, 12: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಯುಗಾದಿ ನಂತರ ರಾಜ್ಯದ ಹಲವೆಡೆ ಮಳೆರಾಯ ತಂಪೆರೆಯುತ್ತಲೇ ಇದ್ದಾನೆ. ಇದೀಗ ಕಾಫಿನಾಡು ಅಂತಲೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರಿನ ಹಲವೆಡೆ ಅಬ್ಬರದ ಮಳೆಯಾಗಿದ್ದು, ಇದರಿಂದ ಈ ಭಾಗದ ಜನರಿಗೆ ಸಂತಸ ತಂದಂತಾಗಿದೆ. ಮತ್ತೊಂದೆಡೆ ಹಲವೆಡೆ ಮರಗಳು ಧರೆಗುರುಳಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು (ಏಪ್ರಿಲ್ 12) ಮಳೆರಾಯ ತಂಪೆರೆದಿದ್ದು, ಈ ಭಾಗದ ಜನರು ಸಂತಸಗೊಂಡಿದ್ದಾರೆ. ಕೊಪ್ಪ ತಾಲೂಕಿನ ಜಯಪುರ, ಮೇಗುಂದ ಗ್ರಾಮ, ಚಿಕ್ಕಮಗಳೂರು ತಾಲೂಕಿನ, ಖಾಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಗ್ರಾಮ, ಶಂಕರ ಫಾಲ್ಸ್, ಅರೆನೂರು ಭಾಗದಲ್ಲಿ ಸುಮಾರು 40 ನಿಮಿಷಗಳ ಕಾಲ ಮಳೆರಾಯ ಆರ್ಭಟಿಸಿದ್ಧಾನೆ.
ಇನ್ನು ಬಿರುಗಾಳಿ ಮಳೆಗೆ ಶಿರಗೋಳ ಗ್ರಾಮದಲ್ಲಿ ರಸ್ತೆಗೆ ಬೃಹತ್ ಗಾತ್ರದ ಅರಳಿ ಮರವೊಂದು ಬಿದ್ದಿದ್ದು, ಸದ್ಯ ಸ್ಥಳದಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಆದರೆ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಇದೇ ಊರಿನಲ್ಲಿ ಬಾಳೆ ಗಿಡಗಳು ಧರೆಗುರುಳಿವೆ. ಅಷ್ಟೇ ಅಲ್ಲದೇ ಸಂಗಮೇಶ್ವರ ಪೇಟೆಯ ಶಾಲೆಯ ಕಾಂಪೌಂಡ್ ಮೇಲೆ ಮರ ಬಿದ್ದ ಘಟನೆಯೂ ನಡೆದಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ಭಾರೀ ಮಳೆ?: ವಿಜಯಪುರ ನಗರ ಸೇರಿದಂತೆ ಕೆಲ ಭಾಗಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಸುಮಾರು 20 ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ. ಗುರುವಾರ ಸಂಜೆಯೂ ಕೂಡ ವಿಜಯಪುರದ ಹಲವೆಡೆ ಮಳೆ ಸುರಿದಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.
ಈಗಾಗಲೇ ಚಿಕ್ಕಮಗಳೂರು ಸೇರಿದಂತೆ ಹಾವೇರಿ, ಧಾರವಾಡ, ಗದಗ, ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ಕೊಡಗು ಸೇರಿದಂತೆ ಕೆಲವೆಡೆ ಮಳೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications