Heavy rain: ಬಿರುಗಾಳಿ ಮಳೆಗೆ ಹಾರಿಹೋದ 20ಕ್ಕೂ ಹೆಚ್ಚು ಮನೆಗಳ ಹೆಂಚುಗಳು, ಎಲ್ಲಿ?
ಚಿಕ್ಕಮಗಳೂರು, ನವೆಂಬರ್, 09: ಇಷ್ಟು ದಿನ ಜಿಲ್ಲೆಯಲ್ಲಿ ಮಳೆಯಿಲ್ಲದೆ ಜನರು ಬಿಸಿಲಿ ಬೇಗೆಯಿಂದ ಬೇಸತ್ತು ಹೋಗಿದ್ದರು. ಆದರೆ ಇದೀಗ ಭಾರೀ ಮಳೆ ಹಿನ್ನೆಲೆ ಬಯಲುಸೀಮೆ ಕಡೂರು ತಾಲೂಕಿನಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನಿನ್ನೆ ಸಂಜೆಯಿಂದ ರಾತ್ರಿವರೆಗೂ ಬಿರುಗಾಳಿ ಮಳೆ ಸುರಿದ ಪರಿಣಾಮ ಕಡೂರಿನಲ್ಲಿ ಕುರುಬರಹಳ್ಳಿಯಲ್ಲಿ 20ಕ್ಕೂ ಹೆಚ್ಚು ಮನೆಯ ಹೆಂಚುಗಳು ಹಾರಿಹೋಗಿವೆ. 15ಕ್ಕೂ ಹೆಚ್ಚು ತೆಂಗಿನ ಮರಗಳು ಬುಡಸಮೇತ ಕಿತ್ತು ಬಿದ್ದಿವೆ. ವಿದ್ಯುತ್ ಕಂಬಗಳು ಮನೆ ಮೇಲೆ ಮುರಿದು ಬಿದ್ದಿ, ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಇನ್ನು ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ಜಲಾವೃತವಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.
ರಸ್ತೆ ಜಲಾವೃತ ವಾದ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದ ಘಟನೆಯು ನಡೆಯಿತು. ರಸ್ತೆಯ ಮೇಲೆ ನದಿಯಂತೆ ನೀರು ಹರಿದಿದೆ. ಇನ್ನು ಕಡೂರು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಹಾಗೆಯೇ ಚಿಕ್ಕಮಗಳೂರು ನಗರ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ತುಂತುರು ಮಳೆ ಬಿದ್ದಿದೆ.
ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಳೆ
ಇನ್ನು ಇಷ್ಟು ದಿನ ಬಿಸಿಲಿನ ಧಗೆಯಿಂದ ತತ್ತರಿಸುತ್ತಿದ್ದ ಕೋಟೆ ನಾಡು ಈಗ ಭಾರೀ ಮಳೆಯಿಂದ ತಂಪಾಗಿದೆ. ಮತ್ತೊಂದೆಡೆ ಮಳೆ ಇಲ್ಲದ ಮುಗಿಲು ನೋಡುತ್ತಾ ಬರದ ದವಡೆಗೆ ಸಿಕ್ಕಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಬುಧವಾರ 20.33 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಹಿರಿಯೂರು-8.4 ಮಿಲಿ ಮೀಟರ್, ಬಬ್ಬೂರು10.6 ಮಿಲಿ ಮೀಟರ್, ಇಕ್ಕನೂರು 34.2 ಮಿಲಿ ಮೀಟರ್, ಈಶ್ವರಗೆರೆ 78.6 ಮಿಲಿ ಮೀಟರ್, ಸೂಗೂರು 38.2 ಮಿಲಿ ಮೀಟರ್ ಮಳೆಯಾದರೆ, ಜವನಗೊಂಡನಹಳ್ಳಿಯಲ್ಲಿ ಸುಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ.
ಹೊಸದುರ್ಗ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು 32.22 ಸರಾಸರಿ ಮಳೆಯಾಗಿದೆ. ಹೊಸದುರ್ಗ 17.4 ಮಿಲಿ ಮೀಟರ್, ಬಾಗೂರು 30.1 ಮಿಲಿ ಮೀಟರ್, ಮತ್ತೋಡು 15.2 ಮಿಲಿ ಮೀಟರ್, ಶ್ರೀರಾಂಪುರ 50.2 ಮಿಲಿ ಮೀಟರ್, ಮಾಡದಕೆರೆಯಲ್ಲಿ 48.2 ಮಿಲಿ ಮೀಟರ್ ಮಳೆಯಾಗಿದೆ.
ಇನ್ನು ಚಿತ್ರದುರ್ಗ 2, 49 ಮಿಲಿ ಮೀಟರ್, ತುರುವನೂರು 65.4 ಮಿಲಿ ಮೀಟರ್, ಹಿರೇಗೊಂಟನೂರು-3.1 ಮಿಲಿ ಮೀಟರ್, ಭರಮಸಾಗರ -25.2 ಮಿಲಿ ಮೀಟರ್, ಸಿರಿಗೆರೆ 38.0 ಮಿಲಿ ಮೀಟರ್, ಐನಹಳ್ಳಿಯಲ್ಲಿ 66.4 ಮಿಲಿ ಮೀಟರ್ ಮಳೆ ಸುರಿದಿದೆ.












Click it and Unblock the Notifications