ಕಾಫಿನಾಡು ಚಿಕ್ಕಮಗಳೂರಿನಲ್ಲಿ ತಿಂಗಳ ಬಳಿಕ ಅಬ್ಬರದ ಮಳೆ
ಚಿಕ್ಕಮಗಳೂರು, ಸೆಪ್ಟೆಂಬರ್, 01: ಈ ಬಾರಿ ಬಯಲು ಸೀಮೆ ಅಷ್ಟೇ ಅಲ್ಲದೆ ಮಲೆನಾಡಿನಲ್ಲಿ ಮಳೆ ಕೊರತೆ ಎದುರಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದೆ. ಅಲ್ಲದೆ ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜಿಲ್ಲೆಯ ಹಲವೆಡೆ ಇದೀಗ ಇಂದು ಮಳೆರಾಯ ತಂಪೆರೆದಿದ್ದಾನೆ.
ಚಿಕ್ಕಮಗಳೂರು ನಗರದಲ್ಲಿ ಇಂದು ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟಿದ್ದವು. ಇನ್ನು ಕೆಲವೆಡೆ ರಸ್ತೆಗಳು ಬ್ಲಾಕ್ ಆಗಿ ವಾಹನ ಸವಾರರು ಪರದಾಡಿದ ಘಟನೆಗಳು ನಡೆದವರು. ಮತ್ತೊಂದೆಡೆ ಕಳೆದೊಂದು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಇದೀಗ ಮಂದಹಾಸ ಮೂಡಿದಂತಾಗಿದೆ.

ಸೆಪ್ಟೆಂಬರ್ 8ರವರೆಗೆ ಭಾರೀ ಮಳೆ
ರಾಜ್ಯದ ಹಲವು ಜಿಲ್ಲೆಗಳಲ್ಲಿಆಗಸ್ಟ್ 31ರಂದು ರಾತ್ರಿ ಸಾಧಾರಣ ಮಳೆಯಾಗಿದೆ. ಇನ್ನು ಸೆಪ್ಟೆಂಬರ್ 8ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವೆಡೆ ಚದುರಿದಂತೆ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆದೆ.
ಗುರುವಾರ ರಾತ್ರಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ, ಮೈಸೂರು, ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಇನ್ನು ಚಾಮರಾಜನಗರ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಿದೆ. ಇದೇ ರೀತಿಯ ವಾತಾವರಣ ಮುಂದಿನ ಒಂದು ವಾರದವರೆಗೆ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ಇದೆ.
ಇಂದು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಕಡೆಯ ಜಿಲ್ಲೆಯಾದ ಚಾಮರಾಜನಗರದಿಂದ ಹಿಡಿದು ಮಧ್ಯ ಕರ್ನಾಟಕದಲ್ಲಿರುವ ವಿಜಯನಗರ, ಬಳ್ಳಾರಿಯಲ್ಲಿ ಮಳೆ ಬೀಳಲಿದೆ ಎಂದು ತಿಳಿಸಿದೆ.
ರಾಜ್ಯದ ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ಅಲ್ಲದೆ ಉಡುಪಿಯಲ್ಲಿ, ಉತ್ತರ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.












Click it and Unblock the Notifications