ಮತಗಟ್ಟೆಯಲ್ಲಿ ನಾಗರಹಾವು ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!
ಚಿಕ್ಕಮಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಮಂಗಳವಾರ ನಡೆಯುತ್ತಿದೆ. ಸೋಮವಾರ ರಾತ್ರಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳು ಅಲ್ಲಿ ನಾಗರಹಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಧರೆಕೊಪ್ಪ ಗ್ರಾಮದ ಮತಗಟ್ಟೆಗೆ ಅಧಿಕಾರಿಗಳು ಸೋಮವಾರ ರಾತ್ರಿ ಆಗಮಿಸಿದರು. ಮತಗಟ್ಟೆ ಬಾಗಿಲು ತೆರೆಯುತ್ತಿದ್ದಂತೆ ನಾಗರಹಾವು ಪ್ರತ್ಯಕ್ಷವಾಯಿತು. ಇದರಿಂದಾಗಿ ಅಧಿಕಾರಿಗಳು ಬೆಚ್ಚಿ ಬಿದ್ದರು.
ಸ್ಥಳೀಯರು ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಅವರು ನಾಗರಹಾವನ್ನು ಹಿಡಿದುಕೊಂಡು ಹೋದರು. ಮತಗಟ್ಟೆಯಲ್ಲಿ ಹಾವು ಕಂಡಿದ್ದರಿಂದ ರಾತ್ರಿಯನ್ನು ಆತಂಕದಲ್ಲೇ ಚುನಾವಣಾ ಸಿಬ್ಬಂದಿ ಕಳೆದರು.

ಕರ್ನಾಟಕದ 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಕೋವಿಡ್ ಸೋಂಕಿತರು ಸಹ ಮತದಾನ ಮಾಡಲು ಕೊನೆಯ ಒಂದು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ.
ಮೊದಲ ಹಂತದಲ್ಲಿ 48,048 ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, 4,377 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ 2ನೇ ಹಂತದ ಮತದಾನ ಡಿಸೆಂಬರ್ 27ರಂದು ನಡೆಯಲಿದೆ.












Click it and Unblock the Notifications