ಟೊಮೆಟೊ ಬಳಿಕ ಶುಂಠಿ ಬೆಲೆ ಗಗನಕ್ಕೆ: ಬೆಲೆ ಸ್ಥಿರವಾಗಿದ್ರೆ ಬೆಳೆಗಾರ ಕುಬೇರ, ದುಬಾರಿ ಬೆಲೆ ವಿವರ ತಿಳಿಯಿರಿ
ಚಿಕ್ಕಮಗಳೂರು, ಜುಲೈ 17: ರಾಜ್ಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದಿದೆ. ಇದೀಗ ಶುಂಠಿಗೆ ಉತ್ತಮ ಬೆಲೆ ಬಂದಿದ್ದು, ರೈತರಿಗೆ ಆದಾಯದ ಕಾಲ ಆರಂಭವಾಗುತ್ತಿದೆ.
60 ಕೆ.ಜಿ. ಚೀಲಕ್ಕೆ ಈ ಹಿಂದೆ 3 ಸಾವಿರ ರೇಟ್ ಸಿಕಿದ್ದಾಗಲೂ, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಹಾಕಿದ ಬಂಡವಾಳಕ್ಕೆ ಡಬಲ್ ಹಣ ಮರಳಿ ಪಡೆದು ಮುಂದಿನ ಬೆಳೆಯ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಆದರೆ ಆದರೆ ಅದೇ 60 ಕೆ.ಜಿ.ಚೀಲಕ್ಕೆ 16-18 ಸಾವಿರ ಬೆಲೆ ಬಂದಿದೆ. ಹೀಗಾಗಿ ರೈತರು ಎಕರೆಗೆ ಐದು ಲಕ್ಷ ಖರ್ಚು ಮಾಡುವುದರಿಂದ ಬೆಳೆ ಬಂದಾಗ 2-3 ಕೋಟಿ ಹಣ ನೋಡುದರೂ ಆಶ್ಚರ್ಯವಿಲ್ಲ.

ಪ್ರಸ್ತುತ ಮಾರ್ಕೆಟ್‌ನಲ್ಲಿ ಶುಂಠಿ ಬೆಲೆ 60 ಕೆ.ಜಿ.ಚೀಲ 16-18 ಸಾವಿರ ಇದೆ. ಆದರೆ ಬೆಳೆ ಕಡಿಮೆ ಇದ್ದು, ಹೊಸ ಫಲ ಹೊಲದಲ್ಲಿ ಅರಳುತ್ತಿದೆ. ಡಿಸೆಂಬರ್ ವೇಳೆಗೂ ಶುಂಠಿ ಬೆಲೆ ಹೀಗೆ ಇದ್ದರೆ ಶುಂಠಿ ಬೆಳೆದ ರೈತರು ಕೋಟ್ಯಾಧೀಶ್ವರರಾಗುತ್ತಾರೆ. ಶುಂಠಿಯ ಇಂದಿನ ಮಾರುಕಟ್ಟೆ ದರ ನೋಡಿ ರೈತರು ಇದೇ ಬೆಲೆ ಮುಂದೆಯೂ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಶುಂಠಿ ದರ ನೋಡುದರೆ ಆಕಾಶ ಮುಟ್ಟಿದೆ. ಆದರೆ ಮಾರ್ಕೇಟ್‍ನಲ್ಲಿ ಇರುವ ಶುಂಠಿಗಿಂತ ಹೊಲದಲ್ಲಿರುವ ಶುಂಠಿಯೇ ಜಾಸ್ತಿಯಾಗಿದೆ. ಯಾಕೆಂದರೆ ಶುಂಠಿ ಬೆಳೆ ಹಾಕೋದೆ ಏಪ್ರಿಲ್-ಮೇ ತಿಂಗಳಿನಲ್ಲಿ. ಶುಂಠಿ ಬೆಳೆ ಬರುವುದಕ್ಕೆ ನವಂಬರ್-ಡಿಸೆಂಬರ್‌ವರೆಗೂ ಕಾಯಲೇಬೇಕು. ಆದರೆ, ಅಲ್ಲಿವರಿಗೂ ಇದೇ ಬೆಲೆ ಇರುತ್ತದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಡಿಸೆಂಬರ್ ವರೆಗೂ ಬೆಲೆ ಇದ್ದೇ ಇರುತ್ತದೆ ಎನ್ನುವುದು ರೈತರ ಆಶಾವಾದ. ಯಾಕಂದರೆ, ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಠಿಯಿಂದ ಶುಂಠಿ ಬಹುತೇಕ ಹಾಳಾಗಿದೆ. ಈ ಬಾರಿ ಸಾಧಾರಣ ಮಳೆಯಾಗಿದ್ದು, ಬೆಳೆ ಉತ್ತಮವಾಗಿದೆ. ಹಾಗಾಗಿ, ಈ ಬಾರಿ ಒಳ್ಳೆ ಫಸಲಿನ ಜೊತೆ ಹಣ ನೋಡುವ ನಿರೀಕ್ಷೆ ರೈತರದ್ದಾಗಿದೆ. ಎಕರೆಗೆ 300-400 ಚೀಲ ಶುಂಠಿ ಬೆಳೆ ಬರುತ್ತದೆ. ಅಷ್ಟು ಬೆಳೆ ಬಂದಾಗ 3 ಸಾವಿರಕ್ಕೆ ತೃಪ್ತಿ ಪಡುವ ರೈತರಿಗೆ 16-18 ಸಾವಿರ ಸಿಕ್ಕರೆ ಅವರ ಪಾಲಿನ ಉತ್ತಮ ದಿನಗಳು ಆರಂಭವಾಗುತ್ತದೆ.
ಒಟ್ಟಾರೆ, ಸದಾ ನಷ್ಟ-ನಷ್ಟ ಎನ್ನುವ ರೈತರು ಈ ಬಾರಿ ಒಂದಷ್ಟು ಹಣ ನೋಡಿದ್ದಾರೆ. ಅದರಲ್ಲೂ ಟೊಮೆಟೊ ಬೆಳೆದ ರೈತರು ಡಬಲ್ ಖುಷಿಯಾಗಿದ್ದಾರೆ. ಟೊಮೆಟೊ ಬೆಳೆದು ಲಕ್ಷಾಧೀಶ್ವರರಾಗಿದ್ದವರನ್ನು ನೋಡಿದ್ದೇವೆ. ಮುಂದೆ ಶುಂಠಿ ಬೆಳೆದು ಕೋಟ್ಯಾಧೀಶ್ವರರಾಗೋದನ್ನು ನೋಡುವ ದಿನಗಳು ಬರಬಹುದು ಎನ್ನುವ ನಿರೀಕ್ಷೆ ಇದೆ. ಯಾವುದೇ ಬೆಳೆ ಬೆಳೆದರೂ ರೈತರಿಗೆ ನಷ್ಟವಾಗದೇ ಲಾಭ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.












Click it and Unblock the Notifications