ಚಿಕ್ಕಮಗಳೂರು: ಕಾಡುಕೋಣಗಳ ಕಾಟ ತಪ್ಪಿಸಲು ಹೊಸ ಐಡಿಯಾ
ಚಿಕ್ಕಮಗಳೂರು, ಮಾರ್ಚ್ 11: ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ಮಾನವ-ಪ್ರಾಣಿ ಸಂಘರ್ಷ ತಡೆಯಲು ಹೊಸ ಯೋಜನೆಯನ್ನು ರೂಪಿಸಿದೆ. ಆನೆ, ಕಾಡುಕೋಣ ಸೇರಿದಂತೆ ವಿವಿಧ ಪ್ರಾಣಿಗಳಿಂದ ಜಿಲ್ಲೆಯಲ್ಲಿ ಸಂಘರ್ಷ ಉಂಟಾಗುತ್ತಿದೆ. ಈ ಯೋಜನೆಗಾಗಿಯೇ ಅಧಿಕಾರಿಗಳ ತಂಡವೊಂದು ಮಧ್ಯ ಪ್ರದೇಶ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಿಕೊಂಡು ಬಂದಿದೆ. ಕಾಡುಕೋಣಗಳ ಸ್ಥಳಾಂತರ ಪ್ರಕ್ರಿಯೆ ಅಲ್ಲಿ ಯಶಸ್ವಿಯಾಗಿದ್ದು, ಆ ಮಾದರಿಯನ್ನು ಚಿಕ್ಕಮಗಳೂರಿಗೆ ತರಲಾಗುತ್ತಿದೆ.
ಕಾಡುಕೋಣ ಮತ್ತು ಮಾನವ ಸಂಘರ್ಷ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಚರ್ಚೆಯ ವಿಚಾರ. ಈ ಕುರಿತು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದರು. ಆದ್ದರಿಂದ ಈಗ ಇಲಾಖೆ ಮಧ್ಯ ಪ್ರದೇಶ ಮಾದರಿಯಲ್ಲಿ ಕಾಡುಕೋಣಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸಿದೆ.

ಕಾಡುಕೋಣಗಳ ದಾಳಿಗೆ ಸಿಲುಕಿ ಹಲವಾರು ಜನರು ಗಾಯಗೊಂಡಿದ್ದಾರೆ, ಕೆಲವರು ಸಾವನ್ನಪ್ಪಿದ್ದಾರೆ. ತೋಟಗಳಿಗೆ ನುಗ್ಗಿ ಕಾಡುಕೋಣಗಳು ಬೆಳೆ ನಾಶ ಮಾಡಿವೆ. ಆದ್ದರಿಂದ ಜನರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಸಂಘರ್ಷ ತಡೆಯಲು ಅಗತ್ಯವಿರುವ ಕ್ರಮ ಕೈಗೊಳ್ಳಲು ಈಗ ಇಲಾಖೆ ಮುಂದಾಗಿದೆ.
ಕಾಡುಕೋಣಗಳ ಸ್ಥಳಾಂತರ: ಮಧ್ಯ ಪ್ರದೇಶ ರಾಜ್ಯದಲ್ಲಿ ರಕ್ಷಿತ ಅಭಯಾರಣ್ಯ ಪ್ರದೇಶದಿಂದ ಕಾಡುಕೋಣಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳ ತಂಡ ಅಧ್ಯಯನ ನಡೆಸಿದೆ. ಇದೇ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಯ್ದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಈಗ ತೀರ್ಮಾನಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಸ್ಥಳಾಂತರ ಕಾರ್ಯಾಚರಣೆ ನಡೆಸಲು ತಯಾರಿ ನಡೆದಿದೆ. ಮಧ್ಯ ಪ್ರದೇಶದ ಮಾದರಿಯಲ್ಲಿಯೇ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಕಾರ್ಯಾಚರಣೆ ಹೇಗೆ ಯಶಸ್ವಿಗೊಳಿಸಬೇಕು ಎಂದು ಚರ್ಚೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಪ್ರದೇಶದ ಬಂದಾವ್‌ಘರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದ ಕಾಡುಕೋಣಗಳನ್ನು 250 ಕಿ. ಮೀ. ದೂರದಲ್ಲಿರುವ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. 2011ರಲ್ಲಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದುವರೆಗೂ ಸುಮಾರು 170 ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣ-ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಸ್ಥಳಾಂತರ ಪ್ರಕ್ರಿಯೆ ಕಾರ್ಯಾಚರಣೆ ಯೋಜನೆ ರೂಪಿಸಿ, ಮಾರ್ಗಸೂಚಿ ತಯಾರು ಮಾಡಲಾಗಿದೆ. ಅರಣ್ಯ ಇಲಾಖೆ ಯೋಜನೆಗೆ ಸರ್ಕಾರ ಪ್ರಾಥಮಿಕ ಒಪ್ಪಿಗೆಯನ್ನು ನೀಡಿದೆ. ಇದಕ್ಕೆ ಅಗತ್ಯವಿರುವ ಸಾಮಾಗ್ರಿಗಳ ಖರೀದಿ ನಡೆಯಬೇಕಿದೆ.
ಕಾಡುಕೋಣಗಳನ್ನು ಹಿಡಿಯಲು ಪಳಗಿದ ಆನೆಗಳನ್ನು ಬಳಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸಬೇಕು. ಬಳಿಕ ಕಾಡುಕೋಣಗಳನ್ನು ಎಲ್ಲಿಗೆ ಬಿಡಬೇಕು? ಎಂದು ನಿರ್ಧರಿಸಬೇಕು. 8 ತಂಡಗಳನ್ನು ರಚನೆ ಮಾಡಿಕೊಂಡು ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದೆ.
ಜಿಲ್ಲೆಯಲ್ಲಿ ಪ್ರಾಣಿ-ಮಾನವ ಸಂಘರ್ಷದ ಜೊತೆಗೆ ಕಾಡುಕೋಣದ ಹಾವಳಿ ತಪ್ಪಿಸಬೇಕು ಎಂದು ಅರಣ್ಯ ಇಲಾಖೆಯನ್ನು ಜನರು ಒತ್ತಾಯಿಸಿದ್ದರು. ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ಇತ್ತೀಚೆಗೆ ಕಳಸ ಬಂದ್ ನಡೆಸಲಾಗಿತ್ತು.
ಕರ್ನಾಟಕದಲ್ಲಿ ಇದುವರೆಗೂ ಹುಲಿ, ಚಿರತೆ ಸೆರೆ ಹಿಡಿದು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಕಾಡಾನೆಗಳನ್ನು ಹಿಡಿದು ಪಳಗಿಸಲಾಗಿದೆ. ಆದರೆ ಕಾಡುಕೋಣಗಳನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಸಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆದರೆ ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಲಿದೆ.
ಕಾಡಂಚಿನ ಪ್ರದೇಶಕ್ಕೆ ಕಾಡುಕೋಣಗಳು ಆಗಮಿಸುತ್ತವೆ. ಜನವಸತಿ ಪ್ರದೇಶಕ್ಕೆ ಹತ್ತಿರವಿರುವ ಕಾಡುಕೋಣಗಳನ್ನು ಸೆರೆಹಿಡಿದು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತದೆ. ಇದಕ್ಕಾಗಿ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತಿದೆ.












Click it and Unblock the Notifications