ಚಿಕ್ಕಮಗಳೂರು; ಕ್ವಾಟರ್ಸ್‌ಗೆ ಮಹಿಳೆ ಕರೆಸಿಕೊಂಡ ಅರಣ್ಯಾಧಿಕಾರಿ ಮೇಲೆ FIR
ಚಿಕ್ಕಮಗಳೂರು, ನವೆಂಬರ್ 16: ಅರಣ್ಯ ಇಲಾಖೆಯ ಕ್ವಾಟರ್ಸ್‌ಗೆ ಮಹಿಳೆಯನ್ನು ಕರೆಸಿಕೊಂಡು ಉಪವಲಯ ಅರಣ್ಯಾಧಿಕಾರಿಯೊಬ್ಬರು ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಬಲ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೊಪ್ಪ ವಿಭಾಗದ ಉಪವಲಯ ಅರಣ್ಯಾಧಿಕಾರಿ ಚಂದನ್ ಸಿಕ್ಕಿಬಿದ್ದ ಆರೋಪಿ. ಚಂದನ್ ಭಾನುವಾರ ಸರ್ಕಾರಿ ಕ್ವಾಟರ್ಸ್‌ಗೆ ಮಹಿಳೆಯನ್ನು ಕರೆಸಿಕೊಂಡಿದ್ದರು. ಈ ವಿಷಯ ತಿಳಿದ ಗ್ರಾಮಸ್ಥರು ಕ್ವಾಟರ್ಸ್‌ಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಥಳಕ್ಕೆ ಬಾಳೂರು ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಇದೀಗ ಅರಣ್ಯ ಇಲಾಖೆ ಕ್ವಾಟರ್ಸ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸಿದ ಆರೋಪ ಪ್ರಕರಣದಲ್ಲಿ ಬಾಳೂರು ಪೊಲೀಸ್ ಠಾಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಚಂದನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ತಾನು ಡೆಪ್ಯೂಟಿ ಆರ್ ಎಫ್ ಒ ಎನ್ನುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಚಂದನ್ ಜನರಿಂದ ದುಡ್ಡು ಕೀಳುತ್ತಿದ್ದರು. ಅಷ್ಟೇ ಅಲ್ಲ, ತನ್ನ ವ್ಯಾಪ್ತಿಯಲ್ಲಿ ಯಾವುದಾದರೂ ಕೇಸ್ ಆದರೆ ಸಾಕು, ದುಡ್ಡಿಗೆ ಬೇರೆ ರೀತಿಯೇ ಯೋಜನೆ ರೂಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಕ್ವಾಟರ್ಸ್ ಗೆ ಕರೆಸಿಕೊಂಡಿದ್ದ ಮಹಿಳೆಯನ್ನೂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಕ್ಕಿಹಾಕಿದ್ದರು ಎನ್ನಲಾಗಿದೆ.
ಈ ಮಹಿಳೆಯ ಮನೆ ಪಕ್ಕದಲ್ಲಿದ್ದ ಒಣಗಿದ ಮರವೊಂದನ್ನು ಕೆಲ ತಿಂಗಳ ಹಿಂದೆ ಮಹಿಳೆಯ ಪತಿ ಕಡಿದಿದು ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಚಂದನ್, ಕೇಸ್ ದಾಖಲಿಸಿ, ಈ ಮಹಿಳೆ ಜೊತೆ ಮಾತನಾಡಿ ಕೇಸ್ ವಾಪಸ್ ತೆಗೆಯೋದಾಗಿ ಹೇಳಿ ಪುಸಲಾಯಿಸಿದ್ದಾರೆ. ಆ ಬಳಿಕ ತಾನು ಕರೆದಾಗ ಕ್ವಾಟರ್ಸ್‌ಗೆ ಬರಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆ ಮಹಿಳೆ ಹಾಗೂ ಅಧಿಕಾರಿ ಚಂದನ್ ಪೊಲೀಸರ ವಶದಲ್ಲಿದ್ದಾರೆ.
Recommended Video
ಸರ್ಕಾರಿ ಕ್ವಾಟರ್ಸ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜೊತೆಗೆ ಈ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications