ತರೀಕೆರೆ ತಾಲೂಕಿನಲ್ಲಿ ಮತ್ತೆ ಮುಂದುವರೆದ ಕಾಡಾನೆಗಳ ಹಾವಳಿ: ಕಂಗಾಲಾದ ಹಳ್ಳಿಗಾಡಿನ ಜನರು
ಚಿಕ್ಕಮಗಳೂರು, ಡಿಸೆಂಬರ್, 18: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ತಕ್ಕಮಟ್ಟಿಗೆ ಕಡಿಮೆ ಆಯ್ತು ಎಂದು ಜನರು ನಿಟ್ಟುಸಿ ಬಿಡುತ್ತಿದ್ದರು. ಆದರೆ ಇದೇ ವೇಳೆಗೆ ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸುತ್ತಮುತ್ತ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವುದು ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಭೈರಾಪುರ, ನಂದಿಬಂಟ್ಲು, ಮಲ್ಲಿಗೇನಹಳ್ಳಿ ಸೇರಿದಂತೆ ಸುತ್ತಮುತ್ತ ಕಾಡಾನೆಗಳ ಹಿಂಡು ಆಗಮಿಸುತ್ತಲೇ ಇವೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ಹಿಂಡು ಓಡಾಡಿರುವುದರಿಂದ ಜನ ಹೊಲ, ಗದ್ದೆ, ತೋಟಗಳಿಗೆ ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇಗೀಗ ಅಡಿಕೆ ಕೊಯ್ಲಿನ ಸಮಯವಾಗಿದೆ. ಆದರೆ ಕಾಡಾನೆಗಳ ಕಾಟದಿಂದ ಬೆಳೆಗಾರರು, ಕೂಲಿ ಕಾರ್ಮಿಕರು ಕೂಡ ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಕಾಡಾನೆಗಳ ಹಾವಳಿಗೆ ಜನರು ಕಂಗಾಲು
ಕಾಡಾನೆಗಳು ಹಿಂಡು ಕುಟುಂಬ ಸಮೇತ ಬಂದು ಬೀಡು ಬೀಡುತ್ತಿವೆ. ಎಷ್ಟು ಸಾರಿ ಓಡಿಸಿದರೂ ಕೂಡ ಮತ್ತ ಅದೇ ಸ್ಥಳಕ್ಕೆ ಬಂದು ನೆಲೆಯೂರುತ್ತಿವೆ. ಹೀಗೆ ಕಾಡಾನೆಗಳ ಹಾವಳಿಗೆ ಇಲ್ಲಿನ ಜನರು ಹೈರಾಣಾಗಿದ್ದಾರೆ. ಸಂಜೆ ನಾಲ್ಕು-ಐದು ಗಂಟೆ ಆಗುತ್ತಿದ್ದಂತೆ ಹೊಲ, ಗದ್ದೆ, ತೋಟಗಳಿಗೆ ಕಾಡಾನೆಗಳು ಜಮೀನುಗಳಿಗೆ ನುಗ್ಗಿಬಿಡುತ್ತಿವೆ. ಅಲ್ಲದೇ ಜಮೀನುಗಳಲ್ಲಿ ರಾಜರೋಷವಾಗಿ ಓಡಾಡುತ್ತಾ ಬೆಳೆಗಳನ್ನೆಲ್ಲ ನಾಶ ಮಾಡುತ್ತಿವೆ.

ಕಳೆದ ನಾಲ್ಕೈದು ದಿನದಿಂದ ಸುಮಾರು ಎಂಟು ಕಾಡಾನೆಗಳು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಓಡಾಡುತ್ತಿವೆ. ಇಲ್ಲಿ ಅರಣ್ಯಕ್ಕೆ ಸಮೀಪ ಇರುವ ಉಡೇವ ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಯಾವುದೇ ಪರ್ಯಾಯ ದಾರಿಯಿಲ್ಲದೆ ಇಲ್ಲಿನ ಸ್ಥಳೀಯರು ಆನೆ ಕಂಡಾಗ ಪಟಾಕಿ ಸಿಡಿಸುತ್ತಾರೆ. ಆಗ ಕಾಡಾನೆಗಳು ಬೇರೆ ಕಡೆ ಅಥವಾ ಕಾಡಿನಲ್ಲಿ ಮರೆಯಾಗುತ್ತವೆ. ನಂತರ ಮರುದಿನ ಮತ್ತದೇ ಜಾಗಕ್ಕೆ ಬಂದು ನೆಲೆಯೂರುತ್ತಿವೆ.

ಜಮೀನಿನಲ್ಲೇ ನೆಲೆಯೂರುತ್ತಿವೆ ಕಾಡಾನೆಗಳು
ಸಂಜೆ ಆಗುತ್ತಿದ್ದಂತೆ ಜಮೀನಿನಲ್ಲೇ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುತ್ತವೆ. ಇದರಿಂದ ಏಳೆಂಟು ಹಳ್ಳಿಯ ಜನ ಕಳೆದೊಂದು ವಾರದಿಂದ ಹೈರಾಣಾಗಿದ್ದಾರೆ. ಅರಣ್ಯದ ಅಂಚಿನ ಗ್ರಾಮಗಳಾಗಿರುವುದರಿಂದ ಆನೆ ಹಾವಳಿ ಮಿತಿ ಮೀರುತ್ತಿದೆ. ಹಾಗಾಗಿ, ಅರಣ್ಯ ಇಲಾಖೆ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕು. ಈ ಮೂಲಕ ಕಾಡಾನೆಗಳ ಹಾವಳಿಯಿಂದ ಮುಕ್ತಿ ಕೊಡಿಸಿ ಎನ್ನುವುದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications