ಡಿಕೆ ಶಿವಕುಮಾರ್ ಮುಂದೊಂದು ದಿನ ಸಿಎಂ ಆಗ್ತಾರೆ; ದ್ವಾರಕನಾಥ್
ಚಿಕ್ಕಮಗಳೂರು, ಡಿಸೆಂಬರ್ 26: ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಈಗ ಸಿದ್ದರಾಮಯ್ಯ ಸರ್ಕಾರ ಸೇಫ್ ಆಗಿದೆ ಎಂದು ಡಿ. ಕೆ. ಶಿವಕುಮಾರ್ ಆಧ್ಯಾತ್ಮಿಕ ಗುರು, ಜ್ಯೋತಿಷಿ ದ್ವಾರಕನಾಥ್ ಭವಿಷ್ಯ ನುಡಿದರು.
ಮಂಗಳವಾರ ಮಾತನಾಡಿದ ಅವರು, "ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸದ್ಯಕ್ಕೆ ಸರ್ಕಾರ ಬೀಳುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ" ಎಂದರು.

" ಡಿ. ಕೆ. ಶಿವಕುಮಾರ್ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಶಿವಕುಮಾರ್ ಮೇಲೆ ಅತ್ಯಂತ ಪ್ರೀತಿ ಇದೆ. ಅವರನ್ನು ಕಂಡರೆ ತುಂಬಾ ಇಷ್ಟ. ಮುಂದೊಂದು ದಿನ ಮುಖ್ಯಮಂತ್ರಿಯಾಗಿ ರಾಜ್ಯ ಆಳುವುದಕ್ಕೆ ಅವಕಾಶ ಇದೆ. ಸ್ವಲ್ಪ ಸಮಯ ಬೇಕು, ಆಗೋ ಸಮಯ ಬರಬೇಕು" ಎಂದು ಹೇಳಿದರು.
"ಸದ್ಯ ಮುಖ್ಯಮಂತ್ರಿ ಕುರ್ಚಿಯ ಮೇಲೆ ಸಿದ್ದರಾಮಯ್ಯ ಕೂತಿದ್ದಾರೆ. ಅವರು ಕೂತಿರುವವರೆಗೆ ತೊಂದರೆ ಕೊಡಬೇಡಿ. ನಾನು ಸಿದ್ದರಾಮಯ್ಯ, ಯಡಿಯೂರಪ್ಪ, ಡಿ. ಕೆ. ಶಿವಕುಮಾರ್‌ರನ್ನು ಗೌರವಿಸುತ್ತೇನೆ. ನನ್ನ ಮನೆಯಿಂದ ಆರು ಜನ ಸಿಎಂ ಆಗಿದ್ದಾರೆ. ಅವರಿಂದ ನಾನೂ ಏನೂ ಭಯಸಿಲ್ಲ" ಎಂದು ಸ್ಪಷ್ಟಪಡಿಸಿದರು.
"ನನ್ನ ಶಿಷ್ಯ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾನೆಯೇ? ಎನ್ನುವ ಸಂಶಯ ಎಲ್ಲರಲ್ಲೂ ಇದೆ. ಮುಖ್ಯಮಂತ್ರಿ ಆಗಬೇಕಾರೆ ಸುತ್ತಮುತ್ತ ಶುದ್ಧ ಮನಸ್ಸುಗಳನ್ನುಇಟ್ಟುಕೊಂಡು ಶಾಸಕರ ವಿಶ್ವಾಸಗಳಿಸಬೇಕು. ಶಿವಕುಮಾರ್ ಅವರೇ ನಿಮ್ಮ ಹೆಸರು ಗೊತ್ತಾಗಬೇಕಾದರೆ ಎಲ್ಲಾ ಕಡೆ ಸಂಚಾರ ನಡೆಸಬೇಕು. ಕಾರ್ಯಕರ್ತರೇ ಮುಖ್ಯ, ಕಾರ್ಯಕರ್ತರ ವಿಶ್ವಾಸ ಗಳಿಸಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎನ್ನುವುದು ಸಲ್ಲದ ಮಾತು" ಎಂದರು.
ಮೋದಿ ಪ್ರಧಾನಿಯಾಗುತ್ತಾರೆ; ಜ್ಯೋತಿಷಿ ದ್ವಾರಕನಾಥ್ ಪ್ರಧಾನಿ ಹುದ್ದೆಯ ಬಗ್ಗೆಯೂ ಭವಿಷ್ಯ ನುಡಿದರು. "ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ. ಪ್ರಧಾನಿಮೋದಿಯಲ್ಲಿ ಯಾರೂ ತಪ್ಪು ಕಂಡುಹಿಡಿಯಲು ಆಗಿಲ್ಲ. ವಿರೋಧ ಪಕ್ಷವೇ ಇಲ್ಲ, ಇದು ನಮ್ಮ ಪ್ರಯತ್ನ ಅಲ್ಲ. ಅದೊಂದು ದೈವ ಶಕ್ತಿ. ಅವರಿಗೆ ಪುಣ್ಯ ಇದೆಯೋ ಗೊತ್ತಿಲ್ಲ. ಅವರಿಗೆ ವಿರೋಧದ ಅಲೆಯೇ ಇಲ್ಲ" ಎಂದರು.
"ಮುಂದೆಯೂ ರಾಷ್ಟ್ರವನ್ನು ಆಳುವ ಶಕ್ತಿ ಅವರಲ್ಲಿ ಇದೆ. ಆದರೆ ಪಕ್ಷದಲ್ಲಿ ಒಂದು ಕಾನೂನು ಇದೆ. 75 ವರ್ಷದ ಮೋದಿ ಅದನ್ನು ಉಲ್ಲಂಘನೆ ಮಾಡುವುದಿಲ್ಲ. ಪರಮಾತ್ಮನ ಇಚ್ಛೇ ಇದ್ದರೆ ಅವರೇ ರಾಷ್ಟ್ರಪತಿ ಆಗಬಹುದು. ಸನಾತನ ಧರ್ಮ ಉಳಿಯಬೇಕು" ಎಂದು ಹೇಳಿದರು.
"ವಿರೋಧ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. 2028ಕ್ಕೆ ವಿರೋಧ ಪಕ್ಷ ಬಲವಾಗುತ್ತದೆ. ಪ್ರಧಾನ ಮಂತ್ರಿ ಮೋದಿ ಆಗುವುದನ್ನು ಈ ಬಾರಿ ಯಾರೂ ತಪ್ಪಿಸಲು ಸಾಧ್ಯವಿಲ್ಲ" ಎಂದು ತಿಳಿಸಿದರು.












Click it and Unblock the Notifications