ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ
ಚಿಕ್ಕಮಗಳೂರು, ಆಗಸ್ಟ್, 07: ಕಾಫಿನಾಡಿನ ಜಿಲ್ಲಾಸ್ಪತ್ರೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಇಲ್ಲಿನ ವೈದ್ಯರ ತಂಡ ಬ್ರೈನ್ ಟ್ಯೂಮರ್ ಖಾಯಿಲೆಯಿಂದ ಮೆದುಳು ನಿಷ್ಕ್ರೀಯಗೊಂಡು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆಯೊಬ್ಬರ ಅಂಗಾಂಗಗಳ ದಾನಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಚಿಕ್ಕಮಗಳೂರು ನಗರದ ಸಮಾಜ ಸೇವಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೋಸೆಸ್ ಅವರ ಪತ್ನಿ ಸಹನಾ ರೂಬೆನ್ ಮೊಸೆಸ್ ಅವರು ಕಳೆದ ಶನಿವಾರ ತಮ್ಮ ಮನೆಯಲ್ಲಿದ್ದ ವೇಳೆ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ನಗರದ ಸ್ಪಂದನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಸಹನಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಬ್ರೈನ್ ಟ್ಯೂಮರ್ ಇರುವುದನ್ನು ಪತ್ತೆ ಮಾಡಿದ್ದರು.

ಬಳಿಕ ಶಿವಮೊಗ್ಗದ ವೈದ್ಯರು ಮೆದುಳು ನಿಷ್ಕ್ರೀಯಗೊಂಡಿರುವುದನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಸಹನಾ ರೂಬೆನ್ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಕಳೆದ 2 ದಿನಗಳಿಂದ ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಸಹನಾ ಅವರ ಮೆದುಳು ಹೊರತುಪಡಿಸಿ ಉಳಿದ ಅಂಗಾಂಗಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಈ ಹಿನ್ನೆಲೆಯಲ್ಲಿ ಪತಿ ರೂಬೆನ್ ಅವರು ಪತ್ನಿ ಸಹನಾ ಅವರ ಬಯಕೆಯಂತೆ ಬಹು ಅಂಗಾಂಗಳ ದಾನಕ್ಕೆ ನಿರ್ಧರಿಸಿದ್ದರು. ಇದನ್ನು ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿದ ಅವರು, ಕುಟುಂಬಸ್ಥರ ಒಪ್ಪಿಗೆ ಬಳಿಕ ಸಹನಾ ಅವರ ಬಹುಅಂಗಾಂಗಗಳ ದಾನಕ್ಕೆ ಸಮ್ಮತಿ ನೀಡಿದ್ದರು.
ಮೆದುಳು ನಿಷ್ಕ್ರೀಯಗೊಂಡಿದ್ದ ಸಹನಾ ಅವರ ಅಂಗಾಂಗ ದಾನ ಮಾಡು ಕುಟುಂಬದ ಸದಸ್ಯರು ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮೋಹನ್‍ಕುಮಾರ್ ಜೀವನ ಸಾರ್ಥಕತೆ ಸಂಸ್ಥೆಯೊಂದಿಗೆ ಚರ್ಚಿಸಿ ಶನಿವಾರ ಹಾಗೂ ಭಾನುವಾರ ಬಹು ಅಂಗಾಗಗಳನ್ನು ಬೇರ್ಪಡಿಸುವುದು ಹಾಗೂ ಅಂಗಾಂಗಗಳ ರವಾನೆಗೆ ಮರುಜೋಡಣೆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು.
ಸಹನಾ ಅವರ ಹೃದಯದ ರಕ್ತದ ಮಾದರಿ ಹೊಂದಿಕೆಯಾಗದ ಕಾರಣಕ್ಕೆ ಹೃದಯ ಹೊರತುಪಡಿಸಿ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ 5 ಅಂಗಾಂಗಳ ದಾನಕ್ಕೆ ನಮ್ಮ ವೈದ್ಯರ ತಂಡ ಸಿದ್ಧತೆ ಕೈಗೊಂಡಿತ್ತು ಎಂದು ಡಾ.ಮೋಹನ್‍ಕುಮಾರ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ನೇತೃತ್ವದಲ್ಲಿ 2 ತಜ್ಞ ವೈದ್ಯರ ತಂಡ ಸಹನಾ ರೂಬೆನ್ ಅವರ ಅಂಗಾಂಗ ದಾನದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ದೇಹದ 5 ಅಂಗಾಂಗಗಳನ್ನು ಬೇರ್ಪಡಿಸಿದ್ದು, ಮರುಜೋಡಣೆಗಾಗಿ ಅಂಗಾಂಗಗಳನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಅಪೊಲೊ ಆಸ್ಪತ್ರೆ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಯಿತು.
ಇನ್ನು ಈ ವೇಳೆ ಪತ್ನಿ ನೆನೆದು ರೂಬೆನ್ ಮಾತನಾಡಿ, ನನ್ನ ಮಡದಿಯ ಅಂಗಾಂಗದಿಂದ ನಾಲ್ಕು ಜನರ ಪ್ರಾಣ ಉಳಿಯಲಿ. ಸಂತೋಷದಿಂದ ಅಂಗಾಂಗ ದಾನ ಮಾಡಿದ್ದೇವೆ ಕಣ್ಣೀರಿಡುತ್ತಾ ಹೇಳಿದರು.
ಕಳೆದ 9 ತಿಂಗಳ ಹಿಂದೆ ರಕ್ಷಿತಾಬಾಯಿ ಎಂಬ ಯುವತಿಯ ಅಂಗಾಂಗಗಳನ್ನು ರವಾನೆ ಮಾಡಿತ್ತು. ಇದೀಗ 2ನೇ ಬಾರಿಗೆ ಚಿಕ್ಕಮಗಳೂರಿನಿಂದ ಝೀರೋ ಟ್ರಾಫಿಕ್‌ನಲ್ಲಿ ಆಂಬ್ಯುಲೆನ್ಸ್ ಮೂಲಕ ಸಹನಾ ಎಂಬ ಮೃತ ಮಹಿಳೆಯ ಕಣ್ಣು, ಕಿಡ್ನಿ ಹಾಗೂ ಲಿವರ್ ಸೇರಿ ಒಟ್ಟು 5 ಅಂಗಾಗಳನ್ನು ಬೆಂಗಳೂರಿನ ಅಪೋಲೋ ಹಾಗೂ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications