ದತ್ತ ಜಯಂತಿ: ಚಿಕ್ಕಮಗಳೂರಿನ ಈ ಗ್ರಾಮಗಳು ಇಂದು ಬಂದ್, ಪ್ರವಾಸಿಗರಿಗೂ ಇಲ್ಲಿದೆ ಸೂಚನೆ
ಚಿಕ್ಕಮಗಳೂರು, ಡಿಸೆಂಬರ್ 26: ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದು, ಇಂದು ದತ್ತಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಲಿದ್ದು, ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.
ಜಿಲ್ಲೆಯತ್ತ ಸಾವಿರಾರು ಸಾವಿರಾರು ದತ್ತಮಾಲಾಧಾರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಮುಖ್ಯವಾಗಿ ದತ್ತಪೀಠಕ್ಕೆ ತೆರಳುವ ದಾರಿಯಲ್ಲಿರುವ ಎಲ್ಲಾ ಅಂಗಡಿಗಳು ಸೇರಿದಂತೆ ನಗರದ ಎಲ್ಲ ಹೋಟೆಲ್, ಅಂಗಡಿ-ಮುಗ್ಗಟ್ಟುಗಳನ್ನು ತೆರೆಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ನಡೆಯುತ್ತಿದ್ದು, ದತ್ತಪೀಠದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಬಾರಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಗಣ್ಯರು ದತ್ತ ಮಾಲೆ ಹಾಕಿದ್ದಾರೆ. ಇನ್ನು ದತ್ತಮಾಲಾಧಾರಿಗಳು ಆಗಮಿಸುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಬಣಕಲ್, ಕೊಟ್ಟಿಗೆಹಾರ, ಹಾಂದಿ, ವಾಸ್ತರೆ ಗ್ರಾಮಗಳು ಸಹ ಇಂದು ಬಂದ್ ಇರಲಿವೆ.
ದತ್ತ ಭಕ್ತರಿಗೆ ಜಾತಿಭೇದವೂ ಇಲ್ಲ, ಪಕ್ಷ ಭೇದವೂ ಇಲ್ಲ - ಸಿ.ಟಿ.ರವಿ
ಚಿಕ್ಕಮಗಳೂರು: ದತ್ತ ಭಕ್ತರಿಗೆ ಜಾತಿಭೇದವೂ ಇಲ್ಲ, ಪಕ್ಷ ಭೇದವೂ ಇಲ್ಲ, ಆದರೆ, ಕೆಲವರಿಗೆ ಪಕ್ಷ ಬದಲಾದಾಕ್ಷಣ ದತ್ತ ಜಯಂತಿಯಲ್ಲಿ ಭಾಗಿಯಾದರೆ ನಮ್ಮ ಜಾತ್ಯತೀತತೆಗೆ ಭಂಗ ಬರುತ್ತದೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಪಕ್ಷ ಬದಲಾದಾಕ್ಷಣ ಹುಟ್ಟಿದ ಧರ್ಮ ಬದಲಾಗುತ್ತದೆಯೇ ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದತ್ತಜಯಂತಿ ಅಂಗವಾಗಿ ಸೋಮವಾರ ಚಿಕ್ಕಮಗಳೂರಿನಲ್ಲಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹುಟ್ಟಿದ ಧರ್ಮವನ್ನು ಬಿಟ್ಟು ಬೇರೆ ಧರ್ಮವನ್ನು ಆಚರಣೆ ಮಾಡುತ್ತಾರೆ. ಟೋಪಿ ಹಾಕಿಕೊಂಡು ನಮಾಜ್ ಮಾಡುತ್ತಾರೆ. ಆದರೆ, ದತ್ತ ಜಯಂತಿಗೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಬದಲಾದ ಕೂಡಲೇ ಅಪ್ಪ, ಅಮ್ಮ, ಅಣ್ಣ, ತಮ್ಮ, ಜಾತಿ ಧರ್ಮ, ಭಕ್ತಿ ಭಾವ ಯಾವುದೂ ಬದಲಾಗುವುದಿಲ್ಲ ಎಂಬುದನ್ನು ಕೆಲ ನಾಯಕರು ಅರಿತುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಸಾವಿರಾರು ವರ್ಷಗಳ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗುತ್ತದೆ - ಆರ್.ಅಶೋಕ್
ಚಿಕ್ಕಮಗಳೂರು: ಶ್ರೀ ದತ್ತಾತ್ರೇಯರು ಹಿಂದೂಗಳ ಆರಾಧ್ಯ ಧೈವ, ಮುಂದಿನ ದಿನಗಳಲ್ಲಿ ದತ್ತಪೀಠ ಸಾವಿರಾರು ವರ್ಷಗಳ ಇತಿಹಾಸವಿರುವ ದತ್ತಪೀಠ ಮುಂದಿನ ದಿನದಲ್ಲಿ ಸಂಪೂರ್ಣ ಹಿಂದೂಗಳಿಗೆ ಸೇರಲಿದೆ. ಆಗ ದತ್ತಪೀಠ ಮುಸ್ಲಿಮರ ಪಾಲಿಗೆ ಪಳೆಯುಳಿಕೆಯಾಗಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.
ದತ್ತಜಯಂತಿ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದತ್ತಪೀಠ ಹಿಂದೂಗಳಿಗೆ ಸೇರಬೇಕು ಎಂಬ ನಮ್ಮ ಹೋರಾಟ ನ್ಯಾಯ ಸಿಗುವವರೆಗೆ ನಿರಂತರವಾಗಿ ನಡೆಯಲಿದೆ ಎಂದರು.
ಮುಸ್ಲಿಮರ ದಾಳಿಯಿಂದ ಹಿಂದೂಗಳ ಲಕ್ಷಾಂತರ ದೇವಾಲಯಗಳು ಧ್ವಂಸವಾಗಿವೆ, ಟಿಪ್ಪು ಸುಲ್ತಾನ್ ಸೇರಿದಂತೆ ಮತಾಂಧರು ತಮ್ಮ ಮತಾಂಧತೆಯಿಂದಲೇ ನಮ್ಮ ದೇವಾಲಯಗಳನ್ನು ಹಾಳು ಮಾಡಿದ್ದಾರೆ. ರಾಮ ಮಂದಿರದಿಂದ ಹಿಡಿದು ದತ್ತಪೀಠದವರೆಗೂ ಹೋರಾಟ ನಡೆದು ರಾಮ ಮಂದಿರ ಹಿಂದೂಗಳ ಭಾವನೆಯಂತೆ ಸಾಕಾರಗೊಳ್ಳುತ್ತಿದೆ. ಅದೇ ರೀತಿ ದತ್ತಪೀಠವೂ ಹಿಂದೂಗಳಿಗೆ ಸೇರಲಿದೆ ಎಂದು ಭವಿಷ್ಯ ನುಡಿದರು.












Click it and Unblock the Notifications