ದಲಿತರು ಬಿಜೆಪಿ ಹೃದಯದಲ್ಲಿದ್ದಾರೆ: ಶಾಸಕ ಸಿ.ಟಿ ರವಿ
ಚಿಕ್ಕಮಗಳೂರು, ನವೆಂಬರ್ 10: ಬಿಜೆಪಿ ದಲಿತರ ಜೊತೆಗಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ದಲಿತರು ಬಿಜೆಪಿ ಹೃದಯದಲ್ಲಿದ್ದಾರೆ. ನನ್ನ ಹೃದಯದಲ್ಲಿದ್ದಾರೆ. ನನ್ನ 34 ವರ್ಷ ರಾಜಕಾರಣದಲ್ಲಿ ಯಾವತ್ತು ತಾರತಮ್ಯ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆಯಿಂದ ಮೋರ್ಚಾದಿಂದ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಹಿನ್ನಲೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿಟಿ ರವಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಆರೋಪಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲಾಗಿದೆ. ಕಾಂಕ್ರಿಟ್ ರಸ್ತೆ ನಿಮಾರ್ಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ ಇವೆಲ್ಲವೂ ಶಾಶ್ವತ ಅಭಿವೃದ್ಧಿ ಕಾಮಗಾರಿಗಳಲ್ಲವೇ ಎಂದು ಕೇಳಿದರು.

ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್, ಅಂಬೇಡ್ಕರ್ ಅವರು ಬದುಕ್ಕಿದ್ದಾಗ ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದೆ. ಆ ಪಕ್ಷಕ್ಕೆ ಪರಿಶಿಷ್ಟ ಜಾತಿಯವರು ಮತ ಹಾಕಬಾರದು. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ 1958ರಿಂದ ಮೀಸಲಾತಿಯನ್ನು ಹೆಚ್ಚಳ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಲಿಲ್ಲ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡುವ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಇನ್ನು ಹಿಂದೂ ಪದದ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ. ಸತೀಶ್ ಜಾರಕಿಹೊಳಿ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಅವರು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅವರಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ . ಹಿಂದೂ ಪದ ಅಶ್ಲೀಲ ಅರ್ಥವನ್ನು ಹೊಂದಿದೆ ಎಂದು ಹೇಳುವ ಮೂಲಕ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರಿಗೆ ಹಾಗೂ ಮರಾಠಿಗರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ತಮ್ಮ ಸೈನ್ಯಕ್ಕೆ ಆಝಾದ್ ಹಿಂದ್ ಫೌಜ್ ಎಂದು ಹೆಸರಿಟ್ಟಿದ್ದರು. ನಮ್ಮ ದೇಶದ ಸೈನಿಕರೂ ಜೈ ಹಿಂದ್ ಎಂದು ಘೋಷಣೆ ಕೂಗುತ್ತಾರೆ. ಹೀಗಿರುವಾಗ ಹಿಂದೂ ಪದ ಅಶ್ಲೀಲ ಪದ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನ ದತ್ತಪೀಠದಲ್ಲಿ ಅರ್ಚಕರ ನೇಮಕ ಸಂಬಂಧ ಪ್ರತಿಕ್ರಿಯಿಸಿದ ಅವರು, ಸರ್ಕಾರ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಎಲ್ಲವು ನಿಯಮ ಬದ್ಧವಾಗಿ ಮಾಡಬೇಕಿದೆ. ಭಾವನಾತ್ಮಕವಾಗಿ ಗಡುವು ನೀಡುವುದು ಬೇರೆ. ಕಾನೂನು ಬದ್ಧವಾಗಿ ಮಾಡುವುದು ಬೇರೆ. ಶ್ರೀರಾಮ ಸೇನೆ ಭಾವನೆ ಬೇರೆ ಅಲ್ಲ, ನಮ್ಮ ಭಾವನೆ ಬೇರೆ ಅಲ್ಲ. ದತ್ತಪೀಠ ಮರೆತಿಲ್ಲ, ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.












Click it and Unblock the Notifications