ಸಿದ್ದರಾಮಯ್ಯ ಸೋಲನ್ನು ಕೆದಕಿದ ಸಿ.ಟಿ.ರವಿ ಹೇಳಿದ್ದು ಹೀಗೆ
ಚಿಕ್ಕಮಗಳೂರು, ಸೆಪ್ಟೆಂಬರ್ 21: "ಸಿದ್ದರಾಮಯ್ಯನವರೇ... ನಿಮಗೆ ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಹೋಗಿ ಪರದಾಡಿ ಗೆಲ್ಲುವ ಸ್ಥಿತಿ ಯಾಕೆ ಬಂತು" ಎಂದು ವ್ಯಂಗ್ಯವಾಡಿದ್ದಾರೆ ಸಚಿವ ಸಿ.ಟಿ.ರವಿ. ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲನ್ನು ಕೆದಕುವ ಮೂಲಕ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ನಾನು ಸಿದ್ದರಾಯ್ಯನವರನ್ನು ದಡ್ಡ ಎನ್ನುವುದಿಲ್ಲ. ದಡ್ಡ ಎಂದು ಹೇಳುವಷ್ಟು ದೊಡ್ಡವನೂ ನಾನಲ್ಲ. ಜಗದಲ್ಲಿ ಮೂರ್ಖರು ಮಾತ್ರ ನಾನೊಬ್ನೆ ಬುದ್ಧಿವಂತ ಅಂದ್ಕೊತಾರೆ. ಜನ ನಿಜವಾದ ಬುದ್ಧಿವಂತನನ್ನು ಬುದ್ಧಿವಂತ ಅಂತಾರೆ. ಸಿದ್ದರಾಮಯ್ಯ ಯಾವ ಸಾಲಿಗೆ ಸೇರ್ತಾರೆ ಅನ್ನೋದನ್ನು ಜನಕ್ಕೆ ಬಿಡ್ತೀನಿ" ಎಂದರು.

ಪ್ರೀತಿ ಇಲ್ಲದಿದ್ರೆ ಜನ ನನ್ನನ್ನು ನಾಲ್ಕು ಬಾರಿ ಚಿಕ್ಕಮಗಳೂರಿನಲ್ಲಿ ಗೆಲ್ಲಿಸ್ತಿರಲಿಲ್ಲ ಎಂದು ಅವರ ಸೋಲಿಗೆ ವ್ಯಂಗ್ಯವಾಡಿದ್ರು. "ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿಯಲ್ಲಿ ಜನ ಯಾಕೆ ಸೋಲಿಸಿದರು ಎಂಬುದನ್ನು ಅರ್ಥೈಸಿಕೊಂಡರೆ ಅವರು ಈ ರೀತಿಯ ಮಾತನ್ನು ಮುಂದುವರೆಸಲ್ಲ. ಸಿದ್ದರಾಮಯ್ಯನನ್ನು ಯಾಕೆ ಸೋಲಿಸಿದ್ದಾರೆ, ಸಿ.ಟಿ.ರವಿ ಯಾಕೆ ಗೆದ್ದಿದ್ದಾರೆ ಅನ್ನೋದು ಅರ್ಥವಾಗುತ್ತೆ" ಎಂದು ಪರೋಕ್ಷವಾಗಿ ನಿಮಗೆ ಜನರ ಪ್ರೀತಿ ಇಲ್ಲ, ಅದಕ್ಕೆ ಸೋತಿರಿ ಎಂದಿದ್ದಾರೆ.
ನಿನ್ನೆ ಕಡೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, "ಸಿ.ಟಿ.ರವಿಗೆ ಏನೂ ಗೊತ್ತಿಲ್ಲ. ಅನನನ್ನೇ ಗೆಲ್ಲಿಸ್ತಿರಾ... ನಾವೇನ್ ಮಾಡೋದು... ಇನ್ಮುಂದೆ ಸ್ವಲ್ಪ ಹುಷಾರಿಗಿರಿ" ಎಂದಿದ್ದರು.












Click it and Unblock the Notifications