Lok Sabha Election: ಕಾಂಗ್ರೆಸ್‌ಅನ್ನು ದುರ್ಬಲ ಎಂದು ಪರಿಗಣಿಸಲ್ಲ- ಸಿ.ಟಿ.ರವಿ
ಚಿಕ್ಕಮಗಳೂರು, ಮಾರ್ಚ್ 18: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ದುರ್ಬಲ ಅಂತಾ ಪರಿಗಣಿಸಲ್ಲ. ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿಗಳು ಇಲ್ಲದೆ ಇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್‌ಗೆ ಹೋಗುತ್ತದೆ. ಯುದ್ಧ ಮತ್ತು ಚುನಾವಣೆಯನ್ನು ಹಗುರವಾಗಿ ಪರಿಗಣಿಸಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಮತ್ತು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಗಂಭೀರವಾಗಿ ಎದುರಿಸಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಎಲ್ಲ ಕಡೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇರುವುದು ಅರ್ಥವಾಗುತ್ತಿದೆ ಎಂದರು.

ಇನ್ನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಿದ ಜನರೂ ಕೂಡ ಈ ಬಾರಿ ನಾವು ದೇಶಕ್ಕಾಗಿ ಮೋದಿಗೆ ವೋಟ್ ಹಾಕುತ್ತೇವೆ ಎನ್ನುತ್ತಿದ್ದಾರೆ. ನಾವೇನೂ ದೇಶ ಭಕ್ತರಲ್ಲವೇ..?, ನಮಗೂ ಮೋದಿ ಪ್ರಧಾನಿ ಆಗುವುದು ಇಷ್ಟ ಎನ್ನುತ್ತಿದ್ದಾರೆ. ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗುತ್ತಿರುವುದು ಕಡಿಮೆ. ಎಲ್ಲಾ ಕಡೆ ಮೋದಿ ಮೋದಿ ಕೇಳುತ್ತಿದೆ ಎಂದರು.
ಚುನಾವಣೆಯನ್ನು ನಾವು ಹಗುರವಾಗಿ ಪರಿಗಣಿಸಬಾರದು. ಗಂಭೀರವಾಗಿ ತೆಗೆದುಕೊಳ್ಳಬೇಕು, ನಾವು ಟಾಸ್ಕ್ ಕೊಟ್ಟಿದ್ದೇವೆ. ಪ್ರತಿ ಬೂತ್ ನಲ್ಲಿ ಮೋದಿಜೀ, ಬಿಜೆಪಿ ಗೆಲ್ಲಿಸಿ ಅಂತಾ ಟಾಸ್ಕ್ ಕೊಟ್ಟಿದ್ದೇವೆ. ಪ್ರತಿ ಬೂತ್ ಗೆದ್ದರೆ ಮೋದಿಜೀ ಗೆದ್ದ ಹಾಗೆ. ತಾನಾಗೀಯೇ ಮೋದಿ ಪ್ರಧಾನಿಯಾಗುತ್ತಾರೆ. ಅದೇ ನಮ್ಮ ಗುರಿ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಯಾರು ಅಭ್ಯರ್ಥಿ ಯಾರು ಆಗುತ್ತಾರೋ ಎನ್ನುವುದು ಮುಖ್ಯವಲ್ಲ. ಕಾಂಗ್ರೆಸ್‌ಗೆ ಒಂದಷ್ಟು ಮತ ಇದೆ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಯಡಿಯೂರಪ್ಪ- ಈಶ್ವರಪ್ಪನವರದ್ದು ನಾಲ್ಕು ದಶಕ ಮೀರಿದ ಸಂಬಂಧ
ಇನ್ನು ಬಿಜೆಪಿ ಲೋಕಸಭಾ ಟಿಕೆಟ್ ಹಂಚಿಕೆ ಬಳಿಕ ಪಕ್ಷದ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅಸಮಾಧಾನದ ಬಗ್ಗೆ ಮಾತನಾಡಿದ ಸಿ.ಟಿ ರವಿ, ಬಿ.ಎಸ್ ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪನವರ ಸಂಬಂಧ ನಾಲ್ಕು ದಶಕ ಮೀರಿದ್ದು. ಒಂದು ಕಾಲದಲ್ಲಿ ವ್ಯವಹಾರವನ್ನೂ ಜಂಟಿಯಾಗಿಯೇ ಮಾಡುತ್ತಿದ್ದರು ಎನ್ನುವುದನ್ನು ಕೇಳಿದ್ದೇವೆ. ಅವರಿಗಿಂತ ಹತ್ತಿರವಾದರೂ ಯಾರು ಇಲ್ಲ. ಎನೇ ಸಮಸ್ಯೆ ಇದ್ದರೂ ಅವರಿಬ್ಬರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.












Click it and Unblock the Notifications