C.T.Ravi: ಸಿ.ಟಿ.ರವಿ ಅರೆಸ್ಟ್ ಬೆನ್ನಲ್ಲೇ ದಿಢೀರ್ ಬಂದ್ ಘೋಷಣೆ
ಕಾಫಿನಾಡು ಚಿಕ್ಕಮಗಳೂರು ಪಟ್ಟಣದಲ್ಲಿ ಇಂದು ದಿಢೀರ್ ಬಂದ್ ಘೋಷಣೆ ಮಾಡಲಾಗಿದೆ. ಬಿಜೆಪಿ ನಾಯಕ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದೆ. ಸಿಟಿ ರವಿ ಬಂಧನದಿಂದ ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ನಗರವಿಡೀ ಸ್ತಬ್ಧವಾಗಿದೆ.
ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ವಿಕ್ರಮ ಅಮಟೆ ಅವರು ನಗರದಾದ್ಯಂತ ಗಸ್ತು ನಡೆಸಿದ್ದು, ಅಲ್ಲಿನ ಬಂದೋಬಸ್ತ್ ಪರಿಶೀಲಿಸಿದ್ದಾರೆ. ಇನ್ನು ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಚಿಕ್ಕಮಗಳೂರು ಸಿ.ಟಿ.ರವಿ ಅವರ ತವರು ಕ್ಷೇತ್ರ ಆಗಿರುವ ಕಾರಣ ಅವರ ಬಂಧನದಿಂದಾಗಿ ಇಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆಗಳಿದ್ದವು. ಈ ಹಿನ್ನೆಲೆ ಮುಂಚೆಯೇ ನಗರದಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ಅಂಗಡಿ-ಮುಗಟ್ಟುಗಳೆಲ್ಲವೂ ಬಂದ್ ಆಗಿವೆ. ನಗರವೆಲ್ಲ ಸ್ತಬ್ಧವಾಗಿದೆ.
ಕಾಂಗ್ರೆಸ್ ಸರ್ಕಾರ ಸಿ.ಟಿ.ರವಿ ಅವರನ್ನು ಬಂಧಿಸಿರುವುದರಿಂದ ಮುಖ್ಯವಾಗಿ ಚಿಕ್ಕಮಗಳೂರು ನಗರದಲ್ಲಿರುವ ಕಾಂಗ್ರೆಸ್ ಕಚೇರಿ, ಸಿ.ಟಿ.ರವಿ ಅವರ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆ, ಬಸವನಹಳ್ಳಿ ರಸ್ತೆ, ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆ, ರತ್ನಗಿರಿ ರಸ್ತೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ಉಳಿದಂತೆ ವಾಹನ ಸಂಚಾರವು ಮಾಮೂಲಿಯಾಗಿದೆ. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದು, ಇಂದು ಬೆಳಿಗ್ಗೆ ಪ್ರತಿಭಟನೆಗೆ ಮುಂದಾದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಶಾಸಕನಿಗೆ ರಕ್ಷಣೆ ಇಲ್ಲ ಎಂದರೇ ಇನ್ನೂ ಜನಸಾಮಾನ್ಯರ ಪಾಡೇನು? ಎಂದು ಜೆಡಿಎಸ್ ಪ್ರಶ್ನಿಸಿದೆ. ಪರಿಷತ್ ಸದಸ್ಯರೊಬ್ಬರ ಮೇಲೆ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ಬೆಳಗಾವಿಯ ಸುವರ್ಣಸೌಧದ ಒಳಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಬಿಗಿ ಭದ್ರತೆಯಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಸುವರ್ಣಸೌಧಕ್ಕೆ ನುಗ್ಗಿ ಶಾಸಕನಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸುವಷ್ಟರ ಮಟ್ಟಿಗೆ ಭದ್ರತಾ ಲೋಪವಾಗಿದೆ ಎಂದು ಕಿಡಿಕಾರಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಪರಿ ಹದಗೆಟ್ಟಿದೆ ಎಂಬುದು ಕರ್ನಾಟಕ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಕಾಂಗ್ರೆಸ್ ಬೆಂಬಲಿಗರ ಈ ಗೂಂಡಾಗಿರಿಯನ್ನು ಆಕಸ್ಮಿಕ ಘಟನೆ ಎಂದು ತಿಪ್ಪೆ ಸಾರಿಸಬೇಡಿ. ಹಲ್ಲೆಗೆ ಯತ್ನಿಸಿದ ಪುಂಡರ ಮೇಲೆ ಕಠಿಣ ಕ್ರಮ ಜರುಗಿಸಿ ಎಂದು ಒತ್ತಾಯಿಸಿದೆ.
ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ? ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪಮುಖ್ಯಮಂತ್ರಿ, ರೌಡಿ ಕೊತ್ವಾಲ್‌ನ ಶಿಷ್ಯ ಡಿ.ಕೆ.ಶಿವಕುಮಾರ್ ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡಿರುವ ನೀನು ರಾಜಕಾರಣಿಯೋ? ರೌಡಿಯೋ? ಎಂದು ಪ್ರಶ್ನಿಸಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರು ಬದುಕಿರುವುದೇ ಪುಣ್ಯ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಕೊಲೆ ಯತ್ನ ಮಾಡಿರುವುದು ಸ್ವಾಭಾವಿಕ! ಇಂತಹ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾಚಿಕೆಯಾಗಬೇಕು. ಡಿಕೆಶಿ ಅವರೇ, ನೀವು ಈಗ ರಾಜ್ಯದ ಉಪಮುಖ್ಯಮಂತ್ರಿ, ಕೊತ್ವಾಲನ ಶಿಷ್ಯ ಎಂಬ ಮನಸ್ಥಿತಿಯಿಂದ ಹೊರಗೆ ಬನ್ನಿ. ಇದು ಪ್ರಜಾಪ್ರಭುತ್ವ ರಾಷ್ಟ್ರ, ನಿಮ್ಮ ಸರ್ವಾಧಿಕಾರ ಇಲ್ಲಿ ನಡೆಯದು ಎಂದು ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.












Click it and Unblock the Notifications