Charmadi Ghat: ₹343.74 ಕೋಟಿ ವೆಚ್ಚದಲ್ಲಿ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿ-ಯಾವ್ಯಾವ ಜಿಲ್ಲೆಗಳಿಗೆ ಸಂಪರ್ಕ?
ಮಂಗಳೂರು, ಫೆಬ್ರವರಿ, 06: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆ ಅಭಿವುದ್ಧಿಯನ್ನು 343.74 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು-ಮೂಡಿಗೆರೆ-ತುಮಕೂರು ವಿಭಾಗದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ 343.74 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ 10.8 ಕಿಲೋ ಮೀಟರ್ ಉದ್ದದ ಪೇವ್ದ್ ಶೋಲ್ಡರ್‌ನೊಂದಿಗೆ ದ್ವಿಪಥ ರಸ್ತೆಯಾಗಿ ಅಗಲೀಕರಣ ಕಾಮಗಾರಿಗೆ ಇಪಿಸಿ ಆಧಾರದಲ್ಲಿ ಅನುಮೋದನೆ ನೀಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
2023-24ನೇ ಸಾಲಿನ ವಾರ್ಷಿಕ ಯೋಜನೆ ಅಡಿಯಲ್ಲಿ ಸುಮಾರು 343.74 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಈ ರಸ್ತೆಯು ರಸ್ತೆ ಬಳಕೆದಾರರಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸಲಿದ್ದು, ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಮಹತ್ವದ ಹೆದ್ದಾರಿ ಯೋಜನೆಗಳನ್ನು ನೀಡಿರುವ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications