ಅಷ್ಟು ಕ್ರೂರ ಮನಸ್ಥಿತಿ ಇದೆ ಎಂದು ಯಾರೂ ಭಾವಿಸಿರಲಿಲ್ಲ: ದರ್ಶನ್ ಕೇಸ್ ಬಗ್ಗೆ ಸಿ.ಟಿ ರವಿ ಹೇಳಿದ್ದೇನು?
ಚಿಕ್ಕಮಗಳೂರು, ಜೂನ್ 16: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ನನ್ನು ಬಂಧಿಸಲಾಗಿದೆ. ಘಟನೆ ನಡೆದು ಒಂದು ವಾರಗಳಾಗಿದೆ. ಕಳೆದ ಆರು ದಿನಗಳಿಂದ ದರ್ಶನ್ ಪೊಲೀಸ್ ಕಸ್ಟಡಿಯಲಿದ್ದು, ವಿಚಾರಣೆ ಮುಂದುವರಿದಿದೆ.
ಈ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಟ ದರ್ಶನ್ ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ಅಷ್ಟು ಕ್ರೂರ ಮನಸ್ಥಿತಿ ಇರುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕೆಲವರು ಹೇಳುತ್ತಾರೆ. ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ ಅಂತಾ. ಅದೇ ರೀತಿ ದರ್ಶನ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದರು ಅನಿಸುತ್ತದೆ ಎಂದರು.

ಈ ಪ್ರಕರಣದಲ್ಲಿ ಮೃತನಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದ ಜೊತೆ ಇದೆ. ನಮ್ಮ ಪಕ್ಷ ಅನ್ಯಾಯ, ದೌರ್ಜನ್ಯದ ವಿರುದ್ಧ ಇದೆ. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು ಎಂದು ಹೇಳಿದರು.
ರಾಜಕಾರಣಿಗಳ ಮೇಲಿನ ಟೀಕೆಗೆ ಅದನ್ನೇ ಮಾಡುವುದಾಗಿದ್ದರೆ, ಗಂಟೆಗೆ ಒಂದು ಹೆಣ ಬೀಳುತ್ತಿತ್ತು. ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಹೊಗಳಿಕೆ ಹಾಗೂ ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವುದು ಧರ್ಮ. ಕ್ರೂರವಾಗಿ ವರ್ತನೆ ಮಾಡಿದ್ದಾರೆ. ಆ ಕ್ರೌರ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.
ಇನ್ನು ಪೊಲೀಸರು ಆರೋಪಿಗಳಿಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡುತ್ತಿದ್ದಾರೆ ಎನ್ನುವ ಸಂದೇಶವೇ ಒಳ್ಳೆದಲ್ಲ. ಆ ರೀತಿ ಇದರೆ ಬಲ ಇದ್ದವನಿಗೆ, ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತದೆ. ಸಂವಿಧಾನಕ್ಕೆ ಅಪಚಾರ ಬಗೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡಬಾರದು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗುವಂತಾಗಲಿ-ಬಿ.ವೈ ವಿಜಯೇಂದ್ರ
ಈ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.' ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈಯ್ದಿರುವ ಪ್ರಕರಣ ಅತ್ಯಂತ ಅಮಾನವೀಯ ಹಾಗೂ ಖಂಡನೀಯ. ನಟ ದರ್ಶನ್ ಸೇರಿದಂತೆ ಇತರರ ಮೇಲೆ ಬಂದಿರುವ ಆರೋಪ ಅತ್ಯಂತ ಕಳವಳಕಾರಿ ಘಟನೆಯಾಗಿದೆ.
ಸರ್ಕಾರ ಯಾವುದೇ ಮುಲಾಜಿಗೂ ಈಡಾಗದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ತನಿಖೆಯನ್ನು ಬಿಗಿಗೊಳಿಸಲಿ. ಮೃತ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ರೇಣುಕಾ ಸ್ವಾಮಿ ಸಾವಿಗೆ ನ್ಯಾಯ ಸಿಗುವಂತಾಗಲಿ ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.












Click it and Unblock the Notifications