ಚಿಕ್ಕಮಗಳೂರಿನಲ್ಲಿ ಸೆರೆಮನೆಯ ಖೈದಿಗಳಿಂದ ಮೂಡಿ ಬಂದ ಸುಂದರ ಉದ್ಯಾನವನ, ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು ಜಿಲ್ಲೆಯ ರತ್ನಗಿರಿ ಬೋರೆ ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಇದು ಕಾರಾಗೃಹ ವಾಸಿಗಳ ಮನಪರಿವರ್ತಿಸುವ ಸುಂದರ ತಾಣವಾಗಿ ಹೊರಹೊಮ್ಮಿದೆ.
ಚಿಕ್ಕಮಗಳೂರು, ಮಾರ್ಚ್, 13: ಜೈಲುಗಳೆಂದರೆ ಶಿಕ್ಷೆ ಅನುಭವಿಸುವ ಸ್ಥಳವೆಂಬ ಭಾವನೆ ಜನಸಾಮಾನ್ಯರದ್ದಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ರತ್ನಗಿರಿ ಬೋರೆ ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಕಾರಾಗೃಹ ವಾಸಿಗಳ ಮನಪರಿವರ್ತಿಸುವ ಸುಂದರ ತಾಣವಾಗಿ ಹೊರಹೊಮ್ಮಿದೆ.
ಕಾರಾಗೃದೊಳಗೆ ಕಾಲಿಟ್ಟೊಡನೆ ಸೆರೆಮನೆ ಎಂಬ ಭಾವನೆ ದೂರವಾಗಿ ನಗರ, ದೊಡ್ಡ ಪಟ್ಟಣದಲ್ಲಿರುವ ಹೊಸ ಉದ್ಯಾನವನ ಅಥವಾ ಗಿರಿಶ್ರೇಣಿಯಲ್ಲಿ ಪ್ರಾಕೃತಿಕ ಸೌಂದರ್ಯವನ್ನು ನೆನಪಿಸುತ್ತದೆ. ಸೆರೆಮನೆಯ ಖಾಲಿ ಜಾಗದಲ್ಲಿ ಗಿರಿಶಿಖರ ನಿರ್ಮಾಣಗೊಂಡಿದೆ. ಬೆಟ್ಟದ ಮೇಲೆ ದೇವಾಲಯವಿದ್ದು, ಕೆಳಗಿನಿಂದ ಮೇಲೆ ಪುಟಿದೇಳುವ ಕಾರಂಜಿ ರೀತಿಯಲ್ಲಿ ಬಣ್ಣದಲ್ಲಿ ಚಿತ್ರಿಸಲಾಗಿದೆ.

ಗ್ರಾಮೀಣ ಸೊಗಡನ್ನು ಬಿಂಬಿಸುತ್ತಿದೆ
ವಿವಿಧ ಬಣ್ಣಗಳ ಹೂವುಗಳು ಅರಳಿನಿಂತಿದೆ. ಶಿಕ್ಷಣವೇ ಶಕ್ತಿ, ಅರಿವೆ ಗುರು ಎನ್ನುವ ಶಾಲೆಯೊಂದು ತಲೆ ಎತ್ತಿದಂತೆ ಭಾಸವಾಗುತ್ತಿದೆ. ಹಾಗೆಯೇ ಇಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸಲಾಗಿದೆ. ತಾಯಿ, ಮಗುವಿನ ಪ್ರೀತಿಯನ್ನು ತೋರಿಸುವ ಚಿತ್ರವನ್ನು ಸಹ ಬಿಡಿಸಲಾಗಿದೆ. ಕಾರಾಗೃಹದೊಳಗೆ ಕಾಲಿಟ್ಟರೆ ಮೊಬೈಲನ್ನು ನಿಗದಿತ ಸ್ಥಳದಲ್ಲಿಡಬೇಕಾಗುತ್ತದೆ.
ಆಧುನಿಕ ತಂತ್ರಜ್ಞಾನದಿಂದ ಪರಿಶೀಲನೆ
ಖೈದಿಗಳಿಗೆ ತಂದಿರುವ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದಿಂದ ಪರಿಶೀಲನೆ ಮಾಡಲಾಗುತ್ತದೆ. ಜೈಲಿನ ಆವರಣದಲ್ಲಿ ಕವಿಗಳು, ನೀತಿ ಬೋಧನೆ, ಸುಂದರ ಬದುಕು ಕಟ್ಟಿಕೊಳ್ಳುವಂತಹ ಬರಹಗಳು ಕಂಡುಬರುತ್ತವೆ. ಹಾಗೆಯೇ ಮುಂದೆ ಸಾಗಿದರೆ ಜಿಲ್ಲಾ ಕಾರಾಗೃಹ ಅಧೀಕ್ಷಕರ ಕಚೇರಿ, ಸೂಪರಿಡೆಂಟ್ ಕಚೇರಿ ಸಿಗುತ್ತದೆ. ಈ ಕಚೇರಿಯ ಹೊರಾಂಗಣವನ್ನು ನೋಡಿದವರಿಗೆ ಕಾರಾಗೃಹ ಸಂಪೂರ್ಣವಾಗಿ ಬದಲಾವಣೆ ಆಗಿರುವುದು ತಕ್ಷಣ ತಿಳಿಯುತ್ತದೆ.
ವಿವಿಧ ಜಾತಿಯ ಹೂವುಗಳು ಅರಳಿ ನಿಂತಿದ್ದು, ಇವುಗಳು ಗಾಳಿ ಬೀಸಿದೊಡನೆ ತಲೆದೂಗುವ ಮೂಲಕ ಜೈಲಿಗೆ ಬಂದವರಿಗೆ ಸ್ವಾಗತ ಕೋರುತ್ತವೆ. ಕಾರಾಗೃಹದ ಖಾಲಿ ಜಾಗದಲ್ಲಿ ಉದ್ಯಾನವನ, ಬಾವಿ, ಕಾರಂಜಿ ನಿರ್ಮಾಣವಾಗಿದೆ. ಇಲ್ಲಿರುವ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳಲು ನಿತ್ಯ ಜನಸಾಗರವೇ ಹರಿದುಬರುತ್ತದೆ.

ಹುಲ್ಲಿನ ಮನೆ ನಿರ್ಮಾಣ
ಈ ಕಾರಾಗೃಹದಲ್ಲಿ ಹಳ್ಳಿಯ ಜನಜೀವನದ ದರ್ಶನ ಮಾಡಿಸಲಾಗಿದೆ. ಹುಲ್ಲಿನ ಮನೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇದರ ಪಕ್ಕದಲ್ಲೇ ಶಿಕ್ಷಣವೇ ಶಕ್ತಿ, ಅರಿವೇ ಗುರು ನಾಮಫಕ ಹೊಂದಿರುವ ಶಾಲೆಯೊಂದು ತಲೆಎತ್ತಿದೆ. ಹಾಗೆಯೇ ಸಹೋದರನೊಬ್ಬ ಸಹೋದರಿಯನ್ನು ಕೈಹಿಡಿದು ಶಾಲೆಗೆ ಕರೆದೊಯ್ಯುತ್ತಿರುಚ ಚಿತ್ರವಂತೂ ಅದ್ಭುತವಾಗಿ ಮೂಡಿಬಂದಿದೆ.
ಗಮನ ಸೆಳೆದ ವಿವಿಧ ಚಿತ್ರಣಗಳು
ಮತ್ತೊಂದೆಡೆ ಘರ್ಜಿಸುವ ವ್ಯಾರ್ಘದ ಚಿತ್ರವನ್ನು ಕೂಡ ಕಾಣಬಹುದಾಗಿದೆ. ಕನ್ನಡ ನಕ್ಷೆ ಅದರ ಮುಂದೆ ಭುವನೇಶ್ವರಿಯ ಚಿತ್ರವಿದೆ. ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಮಾಣಿಕ್ಯಾಧಾರ, ದೇವಿರಮ್ಮನ ಬೆಟ್ಟ, ಹಬ್ಬೆ ಜಲಪಾತವನ್ನೇ ಸೃಷಿ ಮಾಡಿದ್ದಾರೆ. ಜೈಲಿನಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ ಈ ಸುಂದರ ಉದ್ಯಾನ ನಿರ್ಮಾಣಗೊಂಡಿದೆ. ಇವುಗಳನ್ನೆಲ್ಲ ನಿರ್ಮಾಣ ಮಾಡಲು ಹೊರಗಿನಿಂದ ಯಾರನ್ನೂ ಕರೆಸಿಲ್ಲ. ಇಲ್ಲಿರುವ ಕಾರಾಗೃಹ ವಾಸಿಗಳ ಕೌಶಲವನ್ನು ಬಳಸಿಕೊಳ್ಳಲಾಗಿದೆ.
ಈ ಕಾರಾಗೃಹದಲ್ಲಿ 300ಕ್ಕೂ ಹೆಚ್ಚು ಖೈದಿಗಳು ಇದ್ದು, ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿಯವರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದರ ಜೊತೆಗೆ ಮತ್ತಷ್ಟು ಆಕರ್ಷಕ ರೂಪವನ್ನು ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಕಾರಾಗೃಹ ಮನಪರಿ ವರ್ತನೆಯಾಗುವ ತಾಣವಾಗಿದೆ. ಖೈದಿಗಳನ್ನು ಭೇಟಿಯಾಗಲು ಬರುವ ಜನರು ಇಲ್ಲಿನ ವಾತಾವರಣವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications