ಚಿಕ್ಕಮಗಳೂರು; ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ
ಚಿಕ್ಕಮಗಳೂರು, ಡಿಸೆಂಬರ್ 05; ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ನಾಯಿ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಎನ್. ಆರ್. ಪುರದಲ್ಲಿ ನಡೆದಿದೆ. ನಾಯಿ ಮಾಲೀಕನ ಎಡಗಣ್ಣಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ನಾಯಿ ಮಾಲೀಕ ಸುಂದರ್ ರಾಜ್ ಎಂಬುವವರ ಮೇಲೆ ಆಸಿಡ್ ದಾಳಿ ಮಾಡಲಾಗಿದೆ.

ನಾಯಿ ಬೊಗಳಲು ಆರಂಭಿಸಿದಾಗ ಪಕ್ಕದ ಮನೆಯ ಜೇಮ್ಸ್ ನಾಯಿಗೆ ಬೈದಿದ್ದಾರೆ. ಆಗ ಮಾಲೀಕ ಸುಂದರ್ ರಾಜ್ ಸಹ ನಾಯಿಗೆ ಬೈಯಲು ಆರಂಭಿಸಿದ್ದಾರೆ. ಆಗ ಜೇಮ್ಸ್ ತಮಗೆ ಬೈಯುತ್ತಿದ್ದಾನೆ ಎಂದು ತಿಳಿದು ಸುಂದರ್ ರಾಜ್ ಮುಖಕ್ಕೆ ಆಸಿಡ್ ಎರಚಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ; ಸುಂದರ್ ರಾಜ್ ಆಸಿಡ್ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡರು. ಆಗ ಅವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಎಡಗಣ್ಣಿಗೆ ಗಂಭೀರ ಗಾಯಗಳಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರ ಸೂಚನೆ ನೀಡಿದ್ದಾರೆ. ಜೇಮ್ಸ್ ಸುಂದರ್ ರಾಜ್ ತನಗೆ ಬೈಯುತ್ತಿದ್ದಾನೆ ಎಂದು ತಿಳಿದು ಸಿಟ್ಟಿನಿಂದ ಆಸಿಡ್ ದಾಳಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜೇಮ್ಸ್ ವಿರುದ್ಧ ಎನ್. ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸುಂದರ್ ರಾಜ್ ಕುಟುಂಬದವರು ಚಿಕಿತ್ಸೆಯ ಹಣ ಹೊಂದಿಸಲು ಪರದಾಡುತ್ತಿದ್ದಾರೆ.
ಕಾಡಾನೆ ದಾಂದಲೆ, ಬೆಳೆ ನಾಶ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಂಧಲೆ ಮುಂದುವರೆದಿದ್ದು ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಲ್ಲೇನಹಳ್ಳಿ ಗ್ರಾಮದ ನಾಗರಾಜ್ ಎಂಬುವವರ ತೋಟಕ್ಕೆ ನುಗ್ಗಿದ ಸುಮಾರು 12 ಆನೆಗಳ ಹಿಂಡು ಅಡಿಕೆ ಮತ್ತು ಬಾಳೆ ತೋಟವನ್ನು ನಾಶಪಡಿಸಿವೆ. ಸ್ಥಳಕ್ಕೆ ಶಾಸಕ ಜಿ. ಹೆಚ್. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೊಂದು ವಾರದಲ್ಲಿ ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.












Click it and Unblock the Notifications