ಚಿಕ್ಕಮಗಳೂರು ಚೆಕ್‌ಪೋಸ್ಟ್: ಜೆಡಿಎಸ್ ಅಭ್ಯರ್ಥಿಯ ₹9 ಲಕ್ಷ ನಗದು ಜಪ್ತಿ
ಚಿಕ್ಕಮಗಳೂರು, ಏಪ್ರಿಲ್ 12: ಜಿಲ್ಲೆಯಲ್ಲಿ ಒಂದು ಒಂದೇ ದಿನ ವಿವಿಧ ಚೆಕ್‌ಪೋಸ್ಟ್‌ನಲ್ಲಿ ಹಾಗೂ ಸರ್ಪೈಸ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಸುಮಾರು 40 ಲಕ್ಷ ಮೌಲ್ಯದ ಹಣ ಹಾಗೂ ವಿವಿಧ ಮತದ ಆಮೀಷಕ್ಕೆ ಬಳಸುವ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಬಸವನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕಡೂರು ಜೆಡಿಎಸ್ ಅಭ್ಯರ್ಥಿ ಧನಂಜಯ್ ಅವರಿಗೆ ಸೇರಿದೆ ಎನ್ನಲಾದ 9 ಲಕ್ಷ ಹಣವನ್ನು ಅಧಿಕಾರಿಗಳು ಹಾಗೂ ಪೊಲೀಸರು ಸೀಜ್ ಮಾಡಿದ್ದು, ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಜಾಗರ ಸಮೀಪದ ಸರ್ಪೈಸ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ 4,50,000 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಉಡೇವ ಗ್ರಾಮದ ಸರ್ಪೈಸ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 7,94,000 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಡೂರು ತಾಲೂಕಿನ ಬೀರೂರಿನ ಗೋದಾಮಿನಲ್ಲಿ ಮತದಾರರಿಗೆ ಹಂಚಲು ಇಟ್ಟಿದ್ದ ಒಂದೂವರೆ ಲಕ್ಷ ಮೌಲ್ಯದ ಕುಕ್ಕರ್, ಫ್ಯಾನ್, ಮಿಕ್ಸಿಯನ್ನ ವಶಪಡಿಸಿಕೊಂಡಿದ್ದು ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡೂರು ತಾಲೂಕಿನ ಚೌಲ ಹಿರಿಯೂರು ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ 50 ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಗಾಡಿಯನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಕೆಲವು ಅಪಮೌಲ್ಯ ವಸ್ತುಗಳು ಪತ್ತೆಯಾಗಿವೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ 126.14 ಕೋಟಿ ರೂಪಾಯಿ ನಗದು ಜಪ್ತಿ
ಕರ್ನಾಟಕ ರಾಜ್ಯ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚೆಕ್‌ಪೋಸ್ಟ್ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಚುನಾವಣಾಧಿಕಾರಿಗಳು 17.36 ಕೋಟಿ ರೂಪಾಯಿ ದಾಖಲೆ ಇಲ್ಲದ ನಗದು ಹಾಗೂ ಉಡಗೊರೆ ನೀಡಲು ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆಯಾದ ಬಳಿಕ ಮಾರ್ಚ್ 29ರಿಂದ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಈವರೆಗೆ ಚುನಾವಣೆ ಆಯೋಗದ ಅಧಿಕಾರಿಗಳು ಒಟ್ಟು 126.14 ಕೋಟಿ ರೂಪಾಯಿ ನಗದು ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 29 ರಿಂದ ಈವರೆಗೆ 53.83 ಕೋಟಿ ರೂಪಾಯಿ ನಗದು , ಮದ್ಯ, ಉಚಿತವಾಗಿ ನೀಡಲು ಸಾಗಿಸುತ್ತಿದ್ದ ಉಡುಗೊರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣಾ ನೀತಿ ಸಂಹಿತೆ ಅನುಷ್ಠಾನದ ಬಳಿಕ ಈವರೆಗೆ ಬೆಂಗಳೂರು ನಗರದಲ್ಲಿ ಬರೋಬ್ಬರಿ 1,100ಕ್ಕೂ ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಒಟ್ಟು 8.26 ಕೋಟಿ ರೂಪಾಯಿ ನಗದು, 22.16 ಕೋಟಿ ರೂಪಾಯಿಯ ಮೌಲ್ಯದ ಅಕ್ರಮ ಮದ್ಯ, 9 ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಮಾದಕ ವಸ್ತು ಹಾಗೂ 4.73 ಲಕ್ಷ ರೂಪಾಯಿ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 4.87 ಕೋಟಿ ರೂಪಾಯಿಯ ಉಡುಗೊರೆಗಳು ಹಾಗೂ 4.27 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications