ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ಪರ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಭರ್ಜರಿ ಪ್ರಚಾರ
ಚಿಕ್ಕಬಳ್ಳಾಪುರ, ಮೇ 05: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಐದು ದಿನಗಳು ಮಾತ್ರ ಬಾಕಿ ಇದ್ದು, ಕಣದಲ್ಲಿರುವ ಅಭ್ಯರ್ಥಿಗಳು ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಸ್ಟಾರ್ ಪ್ರಚಾರಕರು ಕೂಡ ಚುನಾವಣಾ ಪ್ರಚಾರ ಕಣದಲ್ಲಿದ್ದು, ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಪರ ತೆಲುಗು ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ತೆಲಗು ಹಾಸ್ಯ ನಟ ಬ್ರಹ್ಮಾನಂದಂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಳೇಹಳ್ಳಿ, ಪುರ, ಗೌಡನಗೆರೆ, ಮಂಚೇನಹಳ್ಳಿ, ಜರಬಂಡಹಳ್ಳಿ ಹಾಗೂ ಮಿಣಕನಗುರ್ಕಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸುಧಾಕರ್ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸುಧಾಕರ್ ಅವರು ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ, ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ಇಂತಹ ವ್ಯಕ್ತಿಯನ್ನು ಮತ್ತೆ ಗೆಲ್ಲಿಸಿಕೊಳ್ಳಬೇಕು ಎಂದು ಬ್ರಹ್ಮಾನಂದಂ ಮನವಿ ಮಾಡಿದ್ದಾರೆ.

ನಟ ಬ್ರಹ್ಮಾನಂದಂ ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಡೈಲಾಗ್ ಹೇಳುವ ಮೂಲಕ ಜನರನ್ನು ರಂಜಿಸಿದ್ದು, ಜೊತೆ ಜೊತೆಗೆ ಡಾ.ಕೆ.ಸುಧಾಕರ್ ರವರಿಗೆ ಮತ ನೀಡುವಂತೆ ಮತದಾರರಲ್ಲಿ ಕೋರಿದ್ದಾರೆ.
ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಭಾಷೆಯನ್ನಾಡುವವರ ಸಂಖ್ಯೆ ಅಧಿಕವಾಗಿದೆ. ಜಿಲ್ಲೆಯ ಗುಡಿಬಂಡೆ ತಾಲೂಕಿಗೆ ಹೊಂದಿಕೊಂಡಿರುವ ಮಂಡಿಕಲ್ ಹೋಬಳಿಯಲ್ಲಿ ತೆಲುಗು ಬಾಷೆ ಬಳಸುವವರ ಸಂಖ್ಯೆ ತುಸು ಹೆಚ್ಚು. ಹೀಗಾಗಿ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಡಿಕಲ್ ಹೋಬಳಿಯ ಕಮ್ಮಗುಟ್ಟಹಳ್ಳಿ, ಮಂಡಿಕಲ್, ಅಡ್ಡಗಲ್ , ದೊಡ್ಡಪೈಲಗುರ್ಕಿ , ಪೆರೇಸಂದ್ರ ಹಾಗೂ ಅರೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಧಾಕರ್ ಪರ ಮತಯಾಚನೆ ಮುಂದುವರಿಸಿದ್ದಾರೆ.

ಸಿನಿಮಾ ನಟ ನಟಿಯರಿಂದ ಸುಧಾಕರ್ ಪರ ಭರ್ಜರಿ ಪ್ರಚಾರ
ಇನ್ನೊಂದೆಡೆ ಕ್ಷೇತ್ರಾದ್ಯಂತ ಡಾ.ಕೆ ಸುಧಾಕರ್ ಪರ ಚಿತ್ರರಂಗದ ನಟರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ನಟರಾದ, ನೆನಪಿರಲಿ ಪ್ರೇಮ್, ರಘು ಮುಖರ್ಜಿ, ಭುವನ್ ಮೊನ್ನಣ್ಣ, ದಿಗಂತ್ ಮ೦ಚಾಲೆ, ಅನು ಪ್ರಭಾಕರ್, ದಿವ್ಯಾ ಉರುಡುಗ, ಹರ್ಷಿಕಾ ಪೂಣಚ್ಚ, ಅನು ಪೂವಮ್ಮ ಹಾಗೂ ಕಾಮಿಡಿ ಮಿಂಚು ಪ್ರತಿದಿನ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಡಾ. ಸುಧಾಕರ್ ಸಾಧನೆ ಅಭಿವೃದ್ಧಿಗಳ ಬಗ್ಗೆ ಜನರಿಗೆ ವಿವರಿಸಿ ಮತಯಾಚನೆ ಮಾಡುತ್ತಿದ್ದಾರೆ.
ಪ್ರತಿದಿನ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರು ಗ್ರಾಮೀಣ ಭಾಗ ಹಾಗೂ ನಗರದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ದಿನ ಬಿಜೆಪಿ ಪಕ್ಷದ ಪ್ರಕೋಪದ ಪ್ರಮುಖರ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ವಿವಿಧ ಸಮುದಾಯಗಳು ಅಲ್ಲದೆ, ಅಸಂಘಟಿತ ಕಾರ್ಮಿಕ ವರ್ಗಗಳು, ಅನೇಕ ಸಂಘಸಂಸ್ಥೆಗಳು ಸುಧಾಕರ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಬಲಜಿಗ ಸಮುದಾುದಿಂದ ಸ್ನೇಹ ಸಮ್ಮಿಲನ
ಇನ್ನೊಂದೆಡೆ ಕ್ಷೇತ್ರದಲ್ಲಿನ ಬಲಜಿಗ ಸಮುದಾಯದ ಮುಖಂಡರು ನಗರದಲ್ಲಿ ಗುರುವಾರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸುವ ಮೂಲಕ ಸುಧಾಕರ್‌ಗೆ ಬೆಂಬಲ ಸೂಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಪಿ.ಸಿ.ಮೋಹನ್, ನಟ ದರ್ಶನ್ ಸಹ ಸುಧಾಕರ್ ಪರ ಪ್ರಚಾರ ನಡೆಸಿದರು. ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಮುಗಿದ ನಂತರ ನಗರದ ಬಿಬಿ ರಸ್ತೆ, ಎಂಜಿ ರಸ್ತೆಯಲ್ಲಿ ನಡೆದ ರೋಡ್ ಶೋನಲ್ಲಿ ಮತಯಾಚಿಸಿದರು.












Click it and Unblock the Notifications