Karnataka BJP: ಬಿ. ವೈ. ವಿಜಯೇಂದ್ರ ವಿರೋಧಿ ಬಣ ಸೇರಿದ ಮಾಜಿ ಸಚಿವ!
ಚಿಕ್ಕಬಳ್ಳಾಪುರ, ಜನವರಿ 29: ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮತ್ತಷ್ಟು ಜೋರಾಗಿದೆ. ವರಿಷ್ಠರ ಮಾತಿಗೂ ಸಹ ಮನ್ನಣೆ ಕೊಡದ ರಾಜ್ಯದ ನಾಯಕರು ವಾಕ್ಸಮರದಲ್ಲಿ ನಿರತರಾಗಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಹೋರಾಡಬೇಕಾದ ಪ್ರತಿಪಕ್ಷ ಬಿಜೆಪಿ ತನ್ನ ಬಣ ರಾಜಕೀಯದ ಕಾರಣಕ್ಕೆ ಸುದ್ದಿಯಾಗುತ್ತಿದೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ, ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ನೇರವಾಗಿ ಟೀಕೆಗಳನ್ನು ಮಾಡಿದರು. "ವಿಜಯೇಂದ್ರ ಬಿಜೆಪಿ ಮುಗಿಸಲು ಹೊರಟಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.

ಡಾ. ಕೆ. ಸುಧಾಕರ್ ಹೇಳಿದ್ದೇನು?
* ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ರೆಡ್ಡಿ ನೇಮಕ ಮಾಡಿರುವುದು ಡಾ. ಕೆ. ಸುಧಾಕರ್ ಅಸಮಾಧಾನಕ್ಕೆ ಕಾರಣವಾಗಿದೆ. "ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಕುರಿತು ಚರ್ಚಿಸಿಲ್ಲ, ಈ ಕುರಿತು ಚರ್ಚಿಸಲು ಫೋನ್ ಮಾಡಿದರೆ ಕರೆ ಸ್ವೀಕಾರ ಮಾಡಿಲ್ಲ".
* "ಬಿಜೆಪಿ ಬಿ. ವೈ. ವಿಜಯೇಂದ್ರ ಸ್ವಂತ ಆಸ್ತಿನಾ. ಬಿಜೆಪಿ ಪ್ರಾಬಲ್ಯ ಇರುವ ಕಡೆಯೇ ಇವರು ಗೆಲ್ಲಲು ಪರದಾಡಿದ್ದಾರೆ. ತಾಕತ್ ಇದ್ದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗೆದ್ದು ತೋರಿಸಿ" ಎಂದು ಡಾ. ಕೆ. ಸುಧಾಕರ್ ಸವಾಲು ಹಾಕಿದರು.
* "ನನ್ನ ತಾಳ್ಮೆ ಮುಗಿಯಿತು, ಇನ್ನೇನಿದ್ದರೂ ಯುದ್ಧ. ಬಿ. ವೈ. ವಿಜಯೇಂದ್ರ ನನ್ನ ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ. ನಾನು ಕೇಂದ್ರದ ನಾಯಕರಿಗೆ ದೂರು ಕೊಟ್ಟಿದ್ದೇನೆ. ತುಂಬಾ ನೋವಾಗಿದೆ, ಏನು ಮಾಡಬೇಕು ತಿಳಿದಿದೆ" ಎಂದು ಹೇಳಿದರು.
* "ಬಿ. ಎಸ್. ಯಡಿಯೂರಪ್ಪ ಅವರೇ ಬೇರೆ, ಬಿ. ವೈ. ವಿಜಯೇಂದ್ರ ಅವರೇ ಬೇರೆ. ವಿಜಯೇಂದ್ರ ಹಠ, ದ್ವೇಷ ರಾಜಕಾರಣ ಮಾಡುತ್ತಾರೆ. ಯಡಿಯೂರಪ್ಪ ಅವರ ಗುಣ ವಿಜಯೇಂದ್ರ ಅವರಿಗೆ ಬರಲೇ ಇಲ್ಲ. ಇವರ ಮನಸ್ಥಿತಿ, ಧೋರಣೆ, ಅಹಂಕಾರಕ್ಕೆ ನನ್ನ ಧಿಕ್ಕಾರ" ಎಂದು ಡಾ. ಕೆ. ಸುಧಾಕರ್ ನೇರ ವಾಗ್ದಾಳಿ ನಡೆಸಿದರು.
* "ಬಿ. ವೈ. ವಿಜಯೇಂದ್ರ ತಮಗೆ ಬೇಕಾದವರನ್ನು ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಮಾಡಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಧೋರಣೆ ಬೇಸರ ತಂದಿದೆ" ಎಂದು ಡಾ. ಕೆ. ಸುಧಾಕರ್ ಟೀಕಿಸಿದ್ದಾರೆ.
* "ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು 17 ಜನರು ಬಿಜೆಪಿಗೆ ಬಂದೆವು. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಮೇಲೆ ಬಸವರಾಜ ಬೊಮ್ಮಾಯಿ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ. ನನಗೆ ಬಿಜೆಪಿ ತತ್ವ, ಸಿದ್ದಾಂತ ಅಷ್ಟೇ ಮುಖ್ಯ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ" ಎಂದರು.
* "ನಿಮಗೆ ಎಸ್ ಬಾಸ್, ಜೀ ಹುಜೂರ್ ಎನ್ನುವವರು ಬೇಕು. ಇಂದು ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಯಾವುದೇ ಚುನಾವಣೆ ಸಂವಿಧಾನ ಬದ್ಧವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಚುನಾವಣೆ ಮಾಡಲಿಲ್ಲ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ಏಕಚಕ್ರಾಧಿಪತ್ಯದಂತೆ ಆಗಿದೆ" ಎಂದು ಸುಧಾಕರ್ ಟೀಕಿಸಿದರು.












Click it and Unblock the Notifications