ಚಿಕ್ಕಬಳ್ಳಾಪುರ ಭೂಕಂಪನ ಪೀಡಿತ ಪ್ರದೇಶಗಳಿಗೆ ಸಚಿವ ಸುಧಾಕರ್ ಭೇಟಿ
ಚಿಕ್ಕಬಳ್ಳಾಪುರ, ಜನವರಿ 5: ಜನವರಿ 5ರ ಬುಧವಾರ ಬೆಳಗಿನ ಜಾವ 3:16 ಗಂಟೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಘು ಭೂಕಂಪನ ಸಂಭವಿಸಿ ರಿಕ್ಟರ್ ಮಾಪನದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳೀಯರಲ್ಲಿ ಮನೋಸ್ಥೈರ್ಯ ತುಂಬಿದರು.
ಈ ವೇಳೆ ಅವರು ಮಾತನಾಡಿದ ಸಚಿವ ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯು ಕಳೆದ 50 ವರ್ಷಗಳಲ್ಲಿಯೇ ಆಗಿದ್ದಿಲ್ಲ. ಈ ಮಹಾಮಳೆಯಿಂದ ಅಂತರ್ಜಲದಲ್ಲಿ ತೀವ್ರ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಹೀಗಾಗಿ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಹಲವು ಬಾರಿ ಸಂಭವಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪ ವಲಯದಿಂದ ಬಹುದೂರವಿದ್ದು, ಸುರಕ್ಷಿತ ವಲಯದಲ್ಲಿದೆ ಎಂದರು.
ಈ ಭಾಗದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳವಾಗಿದ್ದು, ಜೊತೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ ಹಾಗೂ ಜಿಲ್ಲಾಡಳಿತವೂ ಸಹ ಹೆಚ್ಚಿನ ನಿಗಾವಹಿಸಿದೆ. ಆದ್ದರಿಂದ ಜನರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಹಾಗೂ ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಗಳನ್ನು ಅವಲೋಕಿಸಲಾಗಿದ್ದು, ಭೂಕಂಪನದ ತೀವ್ರತೆಯ ನಕಾಶೆಯನ್ವಯ ಈ ಭೂಕಂಪನಗಳ ತೀವ್ರತೆಯು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದ್ದು, ಸುಮಾರು 20 ರಿಂದ 30 ಕಿ.ಮೀ ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ.
ಇದರ ಪರಿಣಾಮದಿಂದಾಗಿ ಭೂಮಿಯು ಕೊಂಚ ಅಲುಗಾಡಿದ ಅನುಭವವಾಗಿದ್ದರೂ ಸಹ ಈ ಪ್ರಮಾಣದ ಭೂಕಂಪನವು ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯಲ್ಲಿಯೂ ಅಪಾಯಕಾರಿಯಲ್ಲ. ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲವೆಂದು ಭೇಟಿ ನೀಡಿದ ಗ್ರಾಮಗಳ ಸ್ಥಳೀಯರಿಗೆ ಸಚಿವ ಕೆ. ಸುಧಾಕರ್ ಮನೋಸ್ಥೈರ್ಯ ತುಂಬಿದರು.

ಜನವರಿ 5ರಂದು ಸಂಭವಿಸಿರುವ ಭೂಕಂಪನದ ಕೇಂದ್ರ ಸ್ಥಾನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯತಿಯಿಂದ ಸುಮಾರು 1.5 ಕಿ.ಮೀ ದೂರದಲ್ಲಿ ದಾಖಲಾಗಿದೆ. ಇದು ಸುಮಾರು 2.6ರ ತೀವ್ರತೆಯನ್ನು ಹೊಂದಿದ್ದು, 12 ಕಿ.ಮೀ ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ.
ಇದೇ ವೇಳೆ ಭೂಕಂಪನ ಪೀಡಿತ ಸ್ಥಳದಿಂದಲೇ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಮನೋಜ್‌ರೊಂದಿಗೆ ದೂರವಾಣಿ ಮುಖಾಂತರ ಸಚಿವರು ಮಾತನಾಡಿ, ಪದೇ ಪದೇ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪನಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನ ಮಾಡಿ ಶೀಘ್ರದಲ್ಲಿಯೇ ವರದಿ ನೀಡಿ. ಜಿಲ್ಲೆಯ ಜನತೆಗೆ ಸತ್ಯ ಮತ್ತು ವಸ್ತುನಿಷ್ಠ ಸಂಗತಿಯನ್ನು ತಿಳಿಸಿ ಧೈರ್ಯ ತುಂಬುವಂತೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಲತಾ, ಚಿಕ್ಕಬಳ್ಳಾಪುರ ತಾಲೂಕಿನ ತಹಶೀಲ್ದಾರ ಗಣಪತಿಶಾಸ್ತ್ರೀ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications