ಶುದ್ಧ ನಂದಿನಿ ಹಾಲಿಗೆ ನೀರು ಕಲಬೆರಕೆ ಆರೋಪ, ವಿಡಿಯೋ ವೈರಲ್
ಕರ್ನಾಟಕದ ಬ್ರ್ಯಾಂಡ್ ಆಗಿರುವ ನಂದಿನಿ ಹಾಲು ಇದೀಗ ದೇಶ ವಿದೇಶಗಳಲ್ಲೂ ಜನಮನ್ನಣೆ ಗಳಿಸಿದೆ. ಇತ್ತೀಚೆಗೆ ದೆಹಲಿಯಲ್ಲೂ ನಂದಿನಿ ಹಾಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದರ ನಡುವೆ ನಂದಿನಿ ಹಾಲಿಗೆ ನೀರನ್ನು ಕಲಬೆರಕೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಹಾಲಿನ ಡೈರಿಗಳ ಸಿಬ್ಬಂದಿ ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡುತ್ತಿದ್ದು, ಈ ಮೂಲಕ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಲಿನ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಹಾಲಿನ ಡೈರಿ ಸಿಬ್ಬಂದಿ ಹಾಲಿನ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಈ ಡೈರಿ ಸಿಬ್ಬಂದಿ ಕಳ್ಳಾಟ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ.
ಈ ವಿಚಾರ ಬಯಲಾಗುತ್ತಿದ್ದಂತೆ ಚಿಮುಲ್ ಎಂ.ಡಿ.ಶ್ರೀನಿವಾಸಗೌಡ ಎಚ್ಚೆತ್ತುಕೊಂಡಿದ್ದು, ಡೈರಿಯ ಸಹಾಯಕ ಚೇತನ್ ಎಂಬಾತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಜೊತೆಗೆ ಹಾಲಿಗೆ ನೀರು ಮಿಶ್ರಣ ಕಳ್ಳಾಟ ನಡೆಸಿರುವ ಸಂಬಂಧ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದಾರೆ.

ನೇಮಕಾತಿ ಹಗರಣ, ಹಾಲು ಖರೀದಿ ದರ 2 ರೂಪಾಯಿ ಕಡಿತ ಹೀಗೆ ಕಳೆದ 20 ತಿಂಗಳಿಂದ ಕೇವಲ ಭ್ರಷ್ಟಾಚಾರ, ಅಕ್ರಮ, ರೈತ-ವಿರೋಧಿ ಧೋರಣೆಗಳಿಂದ ಸುದ್ದಿಯಲ್ಲಿರುವ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಈಗ ಮತ್ತೊಂದು ಕಳ್ಳಾಟ ಬಯಲಾಗಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಕೂಡ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಮೆಗಾ ಡೈರಿಗೆ ಸರಬರಾಜು ಮಾಡುತ್ತಿರುವ ಕಳ್ಳಾಟ ಬಯಲಾಗಿದೆ. ರೈತರು ಹಗಲಿರುಳು ಕಷ್ಟ ಪಟ್ಟು ಹಾಲಿನ ಡೈರಿಗಳಿಗೆ ಪರಿಶುದ್ಧ ಹಾಲು ಸರಬರಾಜು ಮಾಡುವ ಮೂಲಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿರುವ ನಂದಿನಿ ಬ್ರ್ಯಾಂಡ್‌ಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸ್ವಕ್ಷೇತ್ರದಲ್ಲೇ ಇಂತಹ ಕಳ್ಳಾಟ ನಡೆಯುತ್ತಿದೆ ಎಂದರೆ ಜಿಲ್ಲೆಯ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ, ಅಕ್ರಮ, ಯಾವ ಮಟ್ಟಕ್ಕೆ ಬೇರೂರಿದೆ ಎಂದು ನೀವೇ ಊಹಿಸಿಕೊಳ್ಳಿ. ರಾಜ್ಯ ಸರ್ಕಾರವು ಈ ಪ್ರಕರಣದ ಸೂಕ್ತ ತನಿಖೆ ನಡೆಸಿ, ಈ ಅಕ್ರಮದ ಹಿಂದಿರುವ ಕಾಣದ ಕೈಗಳನ್ನ ಬಂಧಿಸಬೇಕು ಎಂದು ಸಂಸದ ಸುಧಾಕರ್ ಆಗ್ರಹಿಸಿದ್ದಾರೆ.
ಸದ್ಯ ನಂದಿನಿ ಹಾಲಿಗೆ ಎಲ್ಲೆಡೆಯೂ ಬೇಡಿಕೆ ಇದೆ. ಇದರ ಗುಣಮಟ್ಟದಿಂದಲೇ ನಂದಿನಿ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ರಾಜ್ಯದ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಈ ಘಟನೆಯು ನಂದಿನಿ ಹಾಲಿನ ಗ್ರಾಹಕರಿಗೆ ನಿಜಕ್ಕೂ ಬೇಸರ ತರಿಸಿದೆ.












Click it and Unblock the Notifications