ಚಿಕ್ಕಬಳ್ಳಾಪುರದಲ್ಲಿ ಕೆರೆಗಳಿಂದ ಮನೆಗಳಿಗೆ ನೀರು ಪೂರೈಕೆಗೆ ಯೋಜನೆ: ಸಚಿವ ಡಾ. ಕೆ ಸುಧಾಕರ್
ಚಿಕ್ಕಬಳ್ಳಾಪುರ, ನವೆಂಬರ್ 6: ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಶೇಖರಣಾ ಸಾಮರ್ಥ್ಯವಿರುವ ಕೆರೆಗಳಿಂದ ಮನೆ-ಮನೆಗಳಿಗೆ ನೀರು ಪೂರೈಸುವ ಯೋಜನೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಗೌರಿಬಿದನೂರು ಮೊದಲಾದ ಕಡೆಗಳಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳ ಜನರು ಇಂದಿಗೂ ಕೆರೆ, ಬಾವಿಗಳಿಂದ ನೀರು ತರುವ ಪರಿಸ್ಥಿತಿಯಿದೆ ಎಂದರು.
ಜಿಮ್ನಿಂದ ಹೃದಯಕ್ಕೆ ಹಾನಿಯಾಗುತ್ತದೆ ಎಂಬ ಭಯ ಬೇಡ!
ಕಳೆದ 70 ವರ್ಷಗಳಲ್ಲಿ ಮನೆಗಳಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಮುಂದಿನ ಎರಡು ವರ್ಷದೊಳಗೆ ನೀರಿನ ಲಭ್ಯತೆ ನೋಡಿಕೊಂಡು ಕೊಳಾಯಿ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗುತ್ತದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಚೇನಹಳ್ಳಿಯಲ್ಲಿ ಹೆಚ್ಚು ಶೇಖರಣಾ ಸಾಮರ್ಥ್ಯವಿರುವ ಕೆರೆಗಳಿಂದ ಪಕ್ಕದ ಹಳ್ಳಿಗಳ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಅದೇ ರೀತಿ ದೊಡ್ಡ ಪ್ರಮಾಣದ ಕೆರೆಗಳಿಗೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಮನೆಮನೆಗೆ ನೀರು ಒದಗಿಸುವ ಕೆಲಸ ಮಾಡಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕೆರೆಗಳಿಂದ ನೀರು ಒದಗಿಸುವ ಯೋಜನೆ ರೂಪಿಸಲಾಗುವುದು ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಮಂಚೇನಹಳ್ಳಿ ತಾಲೂಕು ರೂಪಿಸುವ ಕಾರ್ಯ:
ಎಚ್‍ಎನ್ ವ್ಯಾಲಿ, ಕೆಸಿ ವ್ಯಾಲಿಯಿಂದ ಅನೇಕ ಕೆರೆಗಳು ತುಂಬಿದೆ. ಆದರೂ ಅಂತರ್ಜಲ ವೃದ್ಧಿ ಕಷ್ಟವಾಗಿದೆ. ಆದರೆ ಉತ್ತಮ ಮಳೆಯಾಗಿದ್ದು ಶೇ.50ಕ್ಕೂ ಹೆಚ್ಚು ಕೆರೆ ತುಂಬಿವೆ. ಮಂಚೇನಹಳ್ಳಿಯನ್ನು ತಾಲೂಕಾಗಿ ರೂಪಿಸುವ ಕೆಲಸವಾಗಿದೆ. ಮಂಚೇನಹಳ್ಳಿಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೊಸ ರೂಪ ನೀಡಲಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕಿದೆ. ಶೀಘ್ರದಲ್ಲೇ ಸಂಪುಟಕ್ಕೆ ತಂದು ಮಂಜೂರಾತಿ ನೀಡಿ ಜನವರಿ ಒಳಗೆ ಭೂಮಿ ಪೂಜೆ ಮಾಡಲು ಪ್ರಯತ್ನಿಸಲಾಗುವುದು. ಇದು 100 ಹಾಸಿಗೆ ಇರುವ ಆಸ್ಪತ್ರೆಯಾಗಲಿದೆ ಎಂದ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಉದ್ಯೋಗವಕಾಶ ವೃದ್ಧಿಗೆ ಕ್ರಮ:
ಈ ಭಾಗದಲ್ಲಿ ಗುಡಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ನೀಡಲು ಸಾಧ್ಯವಾಗುತ್ತದೆ. ಒಂದನೇ ಹಾಗೂ ಎರಡನೇ ಹಂತದ ಕೈಗಾರಿಕಾಭಿವೃದ್ಧಿಗೆ ಪೂರ್ಣ ಪ್ರಮಾಣದ ಭೂಮಿ ಬಳಸಿಲ್ಲ. 3ನೇ ಹಂತಕ್ಕೆ ಮೊದಲು 1, 2 ನೇ ಹಂತದಲ್ಲೇ ಜಮೀನು ಬಳಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ತಿಂಗಳು ಜಿಲ್ಲೆಗೆ ಆಗಮಿಸಲಿದ್ದು, ನೀರಾವರಿ, ಹಾಲು ಉತ್ಪಾದಕ ಸಂಘದ ವಿಚಾರದಲ್ಲಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.
ಗ್ರಾಮ ವಿಕಾಸ ಯೋಜನೆಯಡಿ ಬಿಸಲಹಳ್ಳಿ ಆಯ್ಕೆ:
ಗ್ರಾಮ ವಿಕಾಸ ಯೋಜನೆಗೆ ಸಂಬಂಧಿಸಿದಂತೆ ಬಿಸಲಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ 430 ಗ್ರಾಮಗಳಿದ್ದು, ಗ್ರಾಮ ವಿಕಾಸ ಯೋಜನೆಗೆ ಬಿಸಲಹಳ್ಳಿ ಗ್ರಾಮ ಆರಿಸಿದ್ದೇನೆ. ಈ ಗ್ರಾಮಕ್ಕೆ 1.64 ಕೋಟಿ ರೂ. ದೊರೆತಿದೆ. ಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದ್ದು, ಸ್ಥಳದಲ್ಲೇ ಅಹವಾಲು ಆಲಿಸಿ ಪರಿಹರಿಸಲಾಗುವುದು ಎಂದರು.
ಗೌರಿಬಿದನೂರಿನಲ್ಲಿ ನಗರೋತ್ಥಾನ ಹಂತ-3 ರಡಿ, ಕುಡಿಯುವ ನೀರಿನ ಯೋಜನೆಗೆ ಚಾಲನೆ, ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ಚಾಲನೆ, 30 ಪೌರಕಾರ್ಮಿಕರಿಗೆ ಇ-ಖಾತಾ ವಿತರಣೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಂಡರು.
ಕಾಂಗ್ರೆಸ್ ರಾಜ್ಯಗಳಲ್ಲಿ ದರ ಇಳಿಕೆ ಮಾಡಿಲ್ಲ:
ಕೇಂದ್ರ ಸರ್ಕಾರವು ಜನರ ಹಿತಕ್ಕಾಗಿ ಪೆಟ್ರೋಲ್, ಡೀಸೆಲ್ ದರ ಕಡಿತಗೊಳಿಸಿದೆ. ಆರ್ಥಿಕ ಸಚಿವರು ಬಹಳ ಹಿಂದೆಯೇ ಈ ಬಗ್ಗೆ ಹೇಳಿಕೊಂಡಿದ್ದರು. ಕಾಂಗ್ರೆಸ್ ನಾಯಕರು ಪೆಟ್ರೋಲ್ ಬೆಲೆ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿದ್ದರು. ಆದರೆ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರ ಮಾತ್ರ ತೈಲ ತೆರಿಗೆ ಇಳಿಸಿವೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ತೆರಿಗೆ ಇಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆದೇಶವನ್ನೇ ಮಾಡಿಲ್ಲ. ರಾಜಕೀಯ ದುರುದ್ದೇಶಕ್ಕೆ ಕಾಂಗ್ರೆಸ್ ನಾಯಕರು ರಸ್ತೆಗೆ ಇಳಿಯುತ್ತಾರೆಯೇ ಹೊರತು ಅವರಿಗೆ ಜನರ ಹಿತ ಬೇಕಿಲ್ಲ. ಪೆಟ್ರೋಲ್ ಬೆಲೆ ಇಳಿಕೆಗೂ ಉಪಚುನಾವಣೆಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಚನಾತ್ಮಕ ಚಿಂತನೆ ಇಲ್ಲ, ಕೇವಲ ರಾಜಕೀಯ ದಿವಾಳಿತನ ಪ್ರದರ್ಶಿಸುತ್ತಿದ್ದಾರೆ ಎಂದು ಸಚಿವ ಡಾ.ಕೆ ಸುಧಾಕರ್ ಆರೋಪಿಸಿದರು.