ಶಿಡ್ಲಘಟ್ಟದಲ್ಲಿ ₹185 ಕೋಟಿ ವೆಚ್ಚದ ಹೈಟೆಕ್ ರೇಷ್ಮೆ ಮಾರ್ಕೆಟ್ ನಿರ್ಮಿಸಲು ಕ್ರಮ: ರೇಷ್ಮೆ ಸಚಿವ
ಚಿಕ್ಕಬಳ್ಳಾಪುರ, ಅಕ್ಟೋಬರ್, 06: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಹೊರವಲಯದಲ್ಲಿ 185 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷದ ವೇಳೆಗೆ ಹೈಟೆಕ್ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸುವ ಉದ್ದೇಶವಿದ್ದು, ಆ ಸಂಬಂಧ ಇಂದು ಸ್ಥಳ ಗುರುತಿಸಲಾಗಿದೆ. ಸದ್ಯದಲ್ಲೆ ಕಾಮಗಾರಿ ಆರಂಭವಾಗಲಿದೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದರು.
ಅವರು ಗುರುವಾರ ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರ ಗ್ರಾಮದ ಸರ್ವೇ ನಂ 19ರ ಸರ್ಕಾರಿ ಜಮೀನಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸುವುದು ಈ ಭಾಗದ ರೈತರ ಬಹುದಿನದ ಬೇಡಿಕೆ ಆಗಿತ್ತು. ಇದನ್ನು ಮನಗಂಡ ಸರ್ಕಾರ 2023-24 ಸಾಲಿನ ಆಯವ್ಯಯದಲ್ಲಿ ಶಿಡ್ಲಘಟ್ಟ ನಗರದಲ್ಲಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು 75 ಕೋಟಿ ಅನುದಾನವನ್ನು ಮಿಸಲಿಟ್ಟಿತ್ತು ಎಂದರು.

ಈ ಯೋಜನೆಗೆ ಒಟ್ಟು 185 ಅನುದಾನದ ಅವಶ್ಯಕತೆ ಇದ್ದು, ಪ್ರಸ್ತುತ ಮೊದಲನೇ ಹಂತದಲ್ಲಿ 80 ಕೋಟಿ ಅನುದಾನದಲ್ಲಿ ಕೆಲಸ ಆರಂಭ ಆಗಲಿದೆ. ಮುಂದಿನ ವರ್ಷದಲ್ಲಿ ಉಳಿಕೆ ಅನುದಾನವನ್ನು ಒದಗಿಸಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸದ್ಯದಲ್ಲೇ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು.
ಪ್ರಸ್ತುತ ಹನುಮಂತಪುರ ಗ್ರಾಮದ ಬಳಿ ಗುರುತಿಸಿರುವ ಜಾಗ 15 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ನಗರಕ್ಕೆ ಸಮೀಪ ಇರುವುದರಿಂದ ರೇಷ್ಮೆ ಗೂಡನ್ನು ರೈತರು ಮಾರುಕಟ್ಟೆಗೆ ತರಲು ಅನುಕೂಲ ಆಗುತ್ತದೆ. ರೇಷ್ಮೆ ವಹಿವಾಟಿಗೂ ಸಹಕಾರಿ ಆಗುತ್ತದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ವ್ಯವಸ್ಥೆ ಮೂಲಕ ವಹಿವಾಟು ನಡೆಯುವುದರಿಂದ ಅದಕ್ಕೆ ಪೂರಕವಾಗಿ ಮಾರುಕಟ್ಟೆಯನ್ನು ರೈತರು ಮತ್ತು ವ್ಯಾಪರಸ್ಥರಿಗೆ ಅನುಕೂಲ ಆಗುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ನೂತನ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು ಸಹಕಾರ ನೀಡಿದ ರೈತರಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ರೈತರಿಗೆ ಧನ್ಯವಾದಗಳನ್ನು ಸಚಿವರು ತಿಳಿಸಿದರು. ಸ್ಥಳೀಯ ಶಾಸಕರು, ಅಧಿಕಾರಿಗಳು, ಜಿಲ್ಲಾಧಿಕಾರಿಯವರು ಹೆಚ್ಚು ಮುತುವರ್ಜಿವಹಿಸಿ ಸೂಕ್ತ ಜಾಗವನ್ನು ಗುರುತಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ಮಾತನಾಡಿ, ಶಿಡ್ಲಘಟ್ಟ ತಾಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರಕ್ಕೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತರಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ತಹಶೀಲ್ದಾರ್ ಅನಿಲ್ ಕುಮಾರ್, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications