ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಆದ್ಯತೆ: ಚಿಕ್ಕಬಳ್ಳಾಪುರದ ಇಬ್ಬರಿಗೆ ಉದ್ಯೋಗಾವಕಾಶ
ಚಿಕ್ಕಬಳ್ಳಾಪುರ, ಅಕ್ಟೋಬರ್ 18: ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳು, ಮನವಿಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಸ್ವೀಕೃತವಾದ ಮನವಿಗಳು, ಅರ್ಜಿಗಳ ವಿಲೇವಾರಿ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಅಧಿಕಾರಿಗಳಿಗೆ ಮನವಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆದಿತ್ತು. ಅಂದು 237 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವಿಕರಿಸುವ ಜೊತೆಗೆ ಐಪಿಜಿಆರ್‌ಎಸ್ ಪೊರ್ಟಲ್ ತಂತ್ರಾಂಶಕ್ಕೆ ನಮೂದನೆ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ವಿಲೇವಾರಿ ಕ್ರಮಕ್ಕಾಗಿ ವರ್ಗಾಯಿಸಲಾಗಿತ್ತು. ಅನಂತರವು ಪೊರ್ಟಲ್ ನಲ್ಲಿ ಮತ್ತೆ 8 ಅರ್ಜಿಗಳನ್ನು ಸ್ವಿಕರಿಸಲಾಗಿದೆ.
ಪ್ರಸ್ತುತ ಜಿಲ್ಲೆಗೆ ಸಂಬಂಧ ಪಟ್ಟಂತೆ ಈ ತಂತ್ರಾಂಶದಲ್ಲಿ ಒಟ್ಟು 245 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು.ಈ ಪೈಕಿ ಬಹುತೇಕ ಅರ್ಜಿಗಳನ್ನು ಭೌತಿಕವಾಗಿ ವಿಲೇವಾರಿ ಮಾಡಲಾಗಿದೆ. ಆದರೆ ವಿಲೇವಾರಿ ಕ್ರಮವನ್ನು ತಂತ್ರಾಂಶದಲ್ಲಿ ನಮೂದಿಸಿ ಬಾಕಿ ಪಟ್ಟಿಯಿಂದ ಅರ್ಜಿಗಳನ್ನು ಮುಕ್ತಗೊಳಿಸುವ ಕಾರ್ಯವನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಮಾಡಿರುವುದಿಲ್ಲ. ಆದ್ದರಿಂದ ಈ ಕಾರ್ಯವನ್ನು ಆದ್ಯತೆ ಮೇಲೆ ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದರು.

ಜನತಾ ದರ್ಶನದಲ್ಲಿ ಉದ್ಯೋಗ ಅರಸಿ ಬಂದ 3 ಅರ್ಜಿದಾರರ ಪೈಕಿ ಇಬ್ಬರಿಗೆ ಉದ್ಯೋಗಾವಕಾಶ ಮಾಡಿಕೊಟ್ಟ ಉದ್ಯೋಗ ವಿನಿಮಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ತಿಳಿಸಿ ಮುಂದಿನ ದಿನಗಳಲ್ಲೂ ಹೀಗೆ ನಿಮ್ಮ ಕಾರ್ಯ ಮುಂದುವರಿಯಲಿ ಎಂದು ಶ್ಲಾಘಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.












Click it and Unblock the Notifications