Karnataka Election 2023: 12 ವರ್ಷಗಳಿಂದ ನನ್ನ ವಿರುದ್ಧ ರಾಜಕೀಯ ಪಿತೂರಿ: ಜನಾರ್ದನ ರೆಡ್ಡಿ ಹೀಗೆ ಹೇಳಿದ್ದು ಯಾರಿಗೆ?
ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕೂಡ ವಿರೋಧಿಗಳು 12 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ತುಳಿಯಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ, ಮಾರ್ಚ್, 13: ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿ 20 ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದೆ. ಈಗ 20 ವಿಮಾನ ನಿಲ್ದಾಣಗಳ ಪೈಕಿ 10 ವಿಮಾನ ನಿಲ್ದಾಣಗಳು ಪೂರ್ಣಗೊಂಡಿವೆ. ಆ ಕಾಲದಲ್ಲಿ ಅಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕೂಡ ವಿರೋಧಿಗಳು 12 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ತುಳಿಯಲು ಪಿತೂರಿ ನಡೆಸುತ್ತಿದ್ದಾರೆ ಎಂದು ಜಿ.ಜನಾರ್ದನ ರೆಡ್ಡಿ ಬಾಗೇಪಲ್ಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈಗ ನಾನು ಎಚ್ಚೆತ್ತುಕೊಂಡು ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದೇನೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಪ್ರಬಲವಾಗಿದ್ದು, 30ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಇದಕ್ಕೂ ಮೊದಲು ಬಾಗೇಪಲ್ಲಿಗೆ ಆಗಮಿಸಿದ ಗಾಲಿ ಜನಾರ್ಧನರೆಡ್ಡಿಯವರಿಗೆ ಪೂರ್ಣಕುಂಬಗಳೊಂದಿಗೆ ಮಹಿಳೆಯರಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ಹಲವು ಭರವಸೆಗಳನ್ನು ನೀಡಿದ ರೆಡ್ಡಿ
ನಂತರ ಅರಿಕೆರೆ ಕೃಷ್ಣಾರೆಡ್ಡಿ ಅಭಿಮಾನಿ ಬಳಗದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ನೂರಾರು ಬೈಕ್‌ಗಳ ಮೂಲಕ ರ್‍ಯಾಲಿ ನಡೆಸಿ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. ಹಾಗೆಯೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಬ್ಯಾಂಕ್ ಖಾತೆಗೆ 15 ಸಾವಿರ ರೂಪಾಯಿ ಹಣ ಸಂದಾಯವಾಗುವಂತೆ ಮಾಡುತ್ತೇನೆ. ಹಾಗೆಯೇ ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಆಧುನಿಕ ಶಿಕ್ಷಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು, ಆಯಾ ಕ್ಷೇತ್ರದಲ್ಲೇ ಬೃಹತ್ ಹೈಟೆಕ್ ಗಾರ್ಮೆಂಟ್ಸ್ ತೆರೆದು ಮಹಿಳೆಯರಿಗೆ ಉದ್ಯೋಗ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ 40 ರಿಂದ 50 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ. ಇದರಲ್ಲಿ 30ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುವಂತಹ ಪ್ರಬಲ ಅಭ್ಯರ್ಥಿಗಳಿದ್ದಾರೆ. ಸ್ವಂತ ಬಲದಿಂದ ಅಧಿಕಾರ ಹಿಡಿಯದಿದ್ದರೂ, ಬೇರೊಂದು ಪಕ್ಷದ ಜೊತೆ ಸೇರಿಯಾದರೂ ಅಧಿಕಾರ ನಡೆಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.












Click it and Unblock the Notifications