SSLC ಫೇಲ್ ಆದವರಿಗೆ ಎರಡೆರಡು ಸಚಿವ ಖಾತೆ: ಶಾಸಕ ಸುಧಾಕರ್ ಗೇಲಿ
ಚಿಕ್ಕಬಳ್ಳಾಪುರ, ಜನವರಿ 07: ಸಚಿವ ಸ್ಥಾನ ಕೈತಪ್ಪಿ ಈಗಾಗಲೇ ಬೇಸರದಲ್ಲಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ಕುಮಾರಸ್ವಾಮಿ ಕೊಕ್ಕೆ ಹಾಕಿರುವುದಕ್ಕೆ ಭಾರಿ ಸಿಟ್ಟಾಗಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಿ ಸುಧಾಕರ್ ಅವರ ಹೆಸರನ್ನು ಪಟ್ಟಿಯಿಂದ ಹೊರಗಿಟ್ಟಿರುವ ಕುಮಾರಸ್ವಾಮಿ ಅವರ ವಿರುದ್ಧ ಸುಧಾಕರ್ ಟೀಕಾ ಪ್ರಹಾರ ನಡೆಸಿದ್ದಾರೆ. ಜೊತೆಗೆ ರೇವಣ್ಣ ಹಾಗೂ ಒಟ್ಟಾರೆ ಜೆಡಿಎಸ್ ಅನ್ನೇ ಟೀಕೆಗೆ ಗುರಿ ಮಾಡಿಕೊಂಡಿದ್ದಾರೆ.
'ನಾನೇನು ನಿಗಮ ಮಂಡಳಿ ಸ್ಥಾನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ, ಅವರಿಗೆ ಕೊಡಲು ಇಷ್ಟವಿಲ್ಲದಿದ್ದರೆ, ತಮ್ಮ ಜೆಡಿಎಸ್ ಕುಟುಂಬಕ್ಕೆ ಕೊಟ್ಟುಕೊಳ್ಳಲಿ' ಎಂದು ಅಸಮಾಧಾನ ಹೊರಹಾಕಿದ್ದಾರೆ ಸುಧಾಕರ್.
ಈ ಮುಂಚೆಯೂ ಸುಧಾಕರ್ ಅವರು ಹಲವು ಬಾರಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರ ಮೇಲೆ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಈಗ ನಿಗಮ ಮಂಡಳಿ ಸ್ಥಾನವೂ ಕೈತಪ್ಪಿರುವ ಕಾರಣ ಒಂದು ಹೆಜ್ಜೆ ಮುಂದೆ ಹೋಗಿ ಟೀಕಿಸಿದ್ದಾರೆ.

'ಎಸ್‌ಎಸ್‌ಎಲ್‌ಸಿ ಪಾಸಾಗದವರಿಗೆ ಎರಡೆರಡು ಸ್ಥಾನ'
ಎಸ್‌ಎಸ್‌ಎಲ್‌ಸಿ ಪಾಸಾಗದವರು ಎರಡೆರಡು ಖಾತೆಗೆ ಮಂತ್ರಿಗಳಾಗಿದ್ದಾರೆ ಆದರೆ ನಿಗಮ ಮಂಡಳಿ ನೀಡಲು ತಾಂತ್ರಿಕ ಕಾರಣದ ನೆಪ ಹೇಳುತ್ತಿದ್ದಾರೆ. ಯಾವ ಸದುದ್ದೇಶದಿಂದ ಐದು ಜನ ಶಾಸಕರ ಹೆಸರಿಗೆ ಬ್ರೇಕ್ ಹಾಕಿದರೋ ಗೊತ್ತಿಲ್ಲ' ಎಂದು ಶಾಸಕ ಸುಧಾಕರ್ ಟೀಕಿಸಿದ್ದಾರೆ.

ಕಾಂಗ್ರೆಸ್ ಬಲಪಡಿಸಲು ಸಚಿವ ಸ್ಥಾನ ಕೇಳಿದ್ದೆ
ನಮ್ಮ ಭಾಗದಲ್ಲಿ ಕಾಂಗ್ರೆಸ್ ಅನ್ನು ಬಲಗೊಳಿಸಲು ಸಚಿವ ಸ್ಥಾನ ಕೇಳಿದ್ದೆ, ಈ ಬಗ್ಗೆ ಹೈಕಮಾಂಡ್ ಸಹ ಯೋಚಿಸಬೇಕಿತ್ತು. ಮಂಡಳಿಗಳನ್ನು ಅಧಿಕಾರಿಗಳೇ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಹಾಗಿದ್ದಮೇಲೆ ಮಂತ್ರಿಗಳು ಏತಕ್ಕೆ ಬೇಕು, ಮುಖ್ಯ ಕಾರ್ಯದರ್ಶಿ ಒಬ್ಬರೇ ಇದ್ದರೆ ಸಾಕಲ್ಲವೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಐದು ಜನ ಶಾಸಕರ ಹೆಸರು ಕೈಬಿಟ್ಟ ಎಚ್‌ಡಿಕೆ
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಶಾಂತಿ ನಗರ ಶಾಸಕ ಎನ್.ಎ.ಹ್ಯಾರಿಸ್ ಅವರ ಹೆಸರುಗಳನ್ನು ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಿಂದ ಕೈಬಿಡಲಾಗಿದೆ. 14 ಶಾಸಕರ ಹೆಸರುಗಳಿಗೆ ಮಾತ್ರವೇ ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ.

ಕುಮಾರಸ್ವಾಮಿಯ ಟೀಕಿಸಿದ್ದ ಸುಧಾಕರ್
ಸುಧಾಕರ್ ಅವರು ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದರು. ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಾಗ, ಜೆಡಿಎಸ್ ವಿರುದ್ಧ ಹಾಗೂ ಸ್ವತಃ ಕುಮಾರಸ್ವಾಮಿ ವಿರುದ್ಧ ಸಾಕಷ್ಟು ಟೀಕಾಪ್ರಹಾರಗಳನ್ನು ಮಾಡಿದ್ದರು. ಇದೇ ಕಾರಣದಿಂದ ಕುಮಾರಸ್ವಾಮಿ ಅವರು ಸುಧಾಕರ್ ಅವರನ್ನು ನಿಗಮ ಮಂಡಳಿ ಅಧ್ಯಕ್ಷ ನೇಮಕಾತಿ ಪಟ್ಟಿಯಿಂದ ಸುಧಾಕರ್ ಅವರನ್ನು ಹೊರಗಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.











Click it and Unblock the Notifications