ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ದಂಡಿಯಲ್ಲಿ ಮೋದಿ, ವಿದುರಾಶ್ವತ್ಥದಲ್ಲಿ ಬಿಎಸ್ವೈ ಚಾಲನೆ
ಚಿಕ್ಕಬಳ್ಳಾಪುರ, ಮಾರ್ಚ್ 11: ದೇಶದ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಮಹತ್ವ ಸಾರುವ "ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ' ಅಂಗವಾಗಿ ದಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅದೇ ರೀತಿ ರಾಜ್ಯದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥದಲ್ಲಿ "ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ' ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಮಾ.12 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿದುರಾಶ್ವತ್ಥಕ್ಕೆ ಸಿಎಂ ಯಡಿಯೂರಪ್ಪ, ರಾಜ್ಯಪಾಲರು ಸೇರಿದಂತೆ ಸಚಿವರು ಆಗಮಿಸಲಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಸೇನಾನಿಗಳ ಸವಿನೆನಪಿನ ಸ್ಮಾರಕ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ಸ್ವಾತಂತ್ರ್ಯ ಸಂಗ್ರಾಮದ ಛಾಯಾಚಿತ್ರ ಗ್ಯಾಲರಿ ವೀಕ್ಷಣೆ ಮಾಡಿಲಿದ್ದು, ಕೊನೆಗೆ ಮೆಮೋರಿಯಲ್ ಹಾಲ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದಂಡಿಯಲ್ಲಿ ಚಾಲನೆ ನೀಡಲಿರುವ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಆಗಸ್ಟ್ 15, 2022ಕ್ಕೆ 75 ವರ್ಷಗಳಾಗಲಿವೆ.

ಹೀಗಾಗಿ ಮಾರ್ಚ್ 12 ರಿಂದ ಆಗಸ್ಟ್ 15, 2022 ರವರೆಗೆ 75 ವಾರಗಳ ಕಾಲ ದೇಶದ ವಿವಿಧ ಸ್ವಾತಂತ್ರ್ಯ ಸಂಗ್ರಾಮದ ಸವಿನೆನೆಪಿನ ತಾಣಗಳಲ್ಲಿ ಈ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಪ್ರತಿ ವಾರ ನಡೆಸಲಾಗುತ್ತದೆ. ನಾಳೆ ಮೊದಲ ವಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.












Click it and Unblock the Notifications