ಪರಿಹಾರದಲ್ಲಿ ವಿಳಂಬ: ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ!
ಚಿಕ್ಕಬಳ್ಳಾಪುರ ನವೆಂಬರ್ 14: ನ್ಯಾಯಾಲಯದ ಆದೇಶದ ನಡುವೆಯೂ ಭೂಸ್ವಾಧೀನಕ್ಕೆ ಪರಿಹಾರ ಒದಗಿಸುವಲ್ಲಿ ನಿರ್ಲಕ್ಷ ತೋರಿದ ಉಪವಿಭಾಗಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ಕೋರ್ಟ್ ಸಿಬ್ಬಂದಿ ನೇತೃತ್ವದಲ್ಲಿ ಜಪ್ತಿಗೊಳಿಸಿದ ಘಟನೆಗೆ ಚಿಕ್ಕಬಳ್ಳಾಪುರ ಸಾಕ್ಷಿ ಆಯಿತು.
ಹೌದು.. ಸರಿಯಾದ ಪರಿಹಾರ ನೀಡದ ಉಪ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ದೂರುದಾರರು ಹೊತ್ತೊಯ್ದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬುಧವಾರ ಉಪ ವಿಭಾಗಾಧಿಕಾರಿಗಳ ಚೇರಿಯಲ್ಲಿನ ಪಿಟೋಪಕರಣಗಳು, ಕುರ್ಚಿಗಳು ಸೇರಿದಂತೆ ಹಲವು ವಸ್ತುಗಳನ್ನು ಕೋರ್ಟ್ ಸಿಬ್ಬಂದಿ ಸಹಾಯದೊಂದಿಗೆ ಸಂತ್ರಸ್ತರು ಹೊರಗೆ ತಂದು ಆವರಣದಲ್ಲಿಟ್ಟಿದ್ದಾರೆ.

ಮೊದಲು ಕಚೇರಿ ನವೀಕರಣ ಇಲ್ಲವೇ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದೇನ ಭಾವಿಸಲಾಗಿತ್ತು. ಕೊನೆಗೆ ಜಪ್ತಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವಕೀಲರು, ತಾಲೂಕು ಕಚೇರಿ ಮತ್ತು ನೊಂದಣಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಸ್ಥಳಕ್ಕೆ ಬಂದು ಈ ವಿಚಾರವಾಗಿ ಚರ್ಚಿಸಿದ್ದಾರೆ.
ಉಪವಿಭಾಗಾಧಿಕಾರಿಗಳು ಎಂದಿನಂತೆ ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಕೋರ್ಟ್ ಸಿಬ್ಬಂದಿ, ಅಧಿಕಾರಿ ಕುಳಿತಿದ್ದ ಕುರ್ಚಿ ಸೇರಿದಂತೆ ಕೊಠಡಿಯಲ್ಲಿದ್ದ ವಿವಿಧ ವಿಟೋಪಕರಣಗಳನ್ನು ಜಪ್ತಿ ಮಾಡಲಾಯಿತು. ಈ ವೇಳೆ ಕೋರ್ಟ್ ಆದೇಶವನ್ನು ಪಾಲಿಸದ ಹಿನ್ನಲೆಯಲ್ಲಿ ಏನು ಮಾಡಲಾಗದೆ ಕಸಿವಿಸಿಗೊಂಡ ಅಧಿಕಾರಿ ಅನ್ಯ ಇಲಾಖೆಯ ಕೊಠಡಿಯತ್ತ ಮುಖ ಮಾಡಿದರು.
ಘಟನೆಗೆ ಕಾರಣ ಏನು?
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಡಿವಿಜಿ ರಸ್ತೆ ವಿಸ್ತರಣೆಗೆ 2006ರಲ್ಲಿ ಅಧಿಸೂಚನೆ ಹೊರಡಿಸಿದ್ದು ಜಿಲ್ಲಾಡಳಿತ 1 ಅಡಿಗೆ 240 ರೂಪಾಯಿ ನಿಗದಿಪಡಿಸಿತ್ತು. ಅದರಂತೆ 2011ರಲ್ಲಿ ತೆರವು ಪ್ರಕ್ರಿಯೆ ಕೈಗೊಂಡಿದ್ದು, ಇದರ ನಡುವೆ ಅಲ್ಪ ಪರಿಹಾರ ಸಾಲದು ಎಂದು ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದಾಗ, ಒಂದು ಅಡಿಗೆ ತಲಾ 890 ರೂಪಾಯಿ ಪರಿಹಾರವನ್ನು ನೀಡಲು ಚಿಕ್ಕಬಳ್ಳಾಪುರದ ಸೀನಿಯರ್ ಜೆಎಂಎಫ್ ಸಿ ನ್ಯಾಯಾಧೀಶರು 2 ತಿಂಗಳ ಹಿಂದೆ ಆದೇಶವನ್ನು ನೀಡಿದ್ದರು.
ಘಟನೆಯ ಹಿನ್ನಲೆ ಏನು?
ಬಾಗೇಪಲ್ಲಿಯ ಡಿವಿಜಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಅಧಿಕಾರಿಗಳಾಗಿರುವ ಉಪ ವಿಭಾಗಾಧಿಕಾರಿ ಭೂಸ್ವಾಧೀನಕ್ಕೆ ಆದೇಶವನ್ನು ಹೊರಡಿಸಿದ್ದರು. ನಿಗದಿಪಡಿಸಿದ ಜಾಗವನ್ನು ಪಿಡಬ್ಲ್ಯೂಡಿ ವಶಪಡಿಸಿಕೊಂಡಿದ್ದು ಈ ವೇಳೆ ಅಡ್ಡ ಬಂದಿದ್ದ ಕಟ್ಟಡವನ್ನು ತೆರವುಗೊಳಿಸಿತು. ಆದರೆ ನಿಯಮಾನುಸಾರ ಸಂಬಂಧಪಟ್ಟ ಜಾಗದ ಮಾಲೀಕರಿಗೆ ಪರಿಹಾರ ನೀಡಿರಲಿಲ್ಲ. ಇದರಿಂದ ಸಂತ್ರಸ್ತರು ನ್ಯಾಯಯುತ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಇದರ ಸುದೀರ್ಘ ವಿಚಾರಣೆ ನಡೆದು ಪರಿಹಾರ ಒದಗಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಆದರೆ ಆದೇಶಕ್ಕೆ ಬೆಲೆ ನೀಡಿದ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನು ಕೋರ್ಟ್ ವತಿಯಿಂದ ಜಪ್ತಿ ಮಾಡಲಾಯಿತು. ಅಧಿಕಾರಿಗಳ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
25 ಕೋಟಿಗೂ ಹೆಚ್ಚು ಪರಿಹಾರ ಕೊಡಬೇಕು:
ಪಟ್ಟಣದ ಡಿವಿಜಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಒಟ್ಟು 390 ಆಸ್ತಿಗಳನ್ನು ಉಪವಿಭಾಗಾದಿಕಾರಿಗಳ ಕಚೇರಿಯ ವತಿಯಿಂದ ಸ್ವಾಧೀನ ಪಡಿಸಿಕೊಂಡಿದ್ದು, ಅಡಿಗೆ 240 ರೂಪಾಯಿ ನೀಡಿ ಕೈ ತೊಳೆದುಕೊಂಡಿತ್ತು, ಪರಿಹಾರ ಹಣ ಸಾಲದು ಎಂದು ಇದನ್ನು ಪ್ರಶ್ನಿಸಿ 32 ಅಂಗಡಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ಅವಧಿಯ ತನಕ ನಡೆದ ವಾದ ಪ್ರತಿವಾದ ಬಳಿಕ 2 ತಿಂಗಳ ಹಿಂದೆ ಒಂದು ಅಡಿಗೆ 895 ರೂಪಾಯಿ ನೀಡುವಂತೆ ಆದೇಶ ನೀಡಿತ್ತು.
2 ತಿಂಗಳು ಸಮಯ ಕೇಳಿದ ಅಧಿಕಾರಿಗಳು:-
ಉಪವಿಭಾಗಾಧಿಕಾರಿಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ ವಸ್ತುಗಳನ್ನು ಹಿಂತಿರುಗಿಸಲಾಯಿತು. ಈ ಹಿಂದೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಹಿಡಿದುಕೊಂಡು ಬಂದು ಗಮನಸೆಳೆದಾಗ ಸಂಬಂಧಪಟ್ಟ ಅಧಿಕಾರಿಗಳು ಅಸಡ್ಡೆ ತೋರಿದರು. ನಿಯಮಾನಸಾರ ಪರಿಹಾರ ಒದಗಿಸುವುದಾಗಿ ದೂರುದಾರರಲ್ಲಿ ಅಧಿಕಾರಿಗಳು ಮನವಿ ಮಾಡಿದರು.
ಪೊಲೀಸರ ಬಲ ಪ್ರಯೋಗದ ಮೂಲಕ ಅಂದು ಉಪ ವಿಭಾಗಾಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ನಮ್ಮ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಭೂಸ್ವಾಧೀನ ಪಡಿಸಿಕೊಂಡಿದ್ದರು. ಆದರೂ ನಮಗೆ ನ್ಯಾಯಯುತವಾದ ಪರಿಹಾರ ಕೊಟ್ಟಿರಲಿಲ್ಲ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಪರಿಹಾರ ಕೊಡದ ಎಸಿ ಕಚೇರಿ ಪೀಠೋಪಕರಣಗಳ ಜಪ್ತಿಗೆ ಆದೇಶಿಸಿತ್ತು ಎಂದು ದೂರುದಾರರಾದ ಬಾಗೇಪಲ್ಲಿ ಪಟ್ಟಣದ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.












Click it and Unblock the Notifications