Chikkaballapur: ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಸದ್ದು: ಕಟ್ಟಡ ಮಾಲೀಕರಿಗೆ ಶಾಕ್!
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 14: ಚಿಕ್ಕಬಳ್ಳಾಪುರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇಂದು ಬೆಳ್ಳಂಬೆಳ್ಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಿಟಾಚಿ, ಜೆಸಿಬಿ ಯಂತ್ರಗಳ ಮೂಲಕ ಪೊಲೀಸ್ ಬಿಗಿ ಭದ್ರತೆಯೊಂದಿಗೆ ರಸ್ತೆ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದೆ.
ನಗರದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಅನವು ಮಾಡಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರಿಗೆ ಮಾಹಿತಿ ನೀಡಿರುವಂತೆ, ಹಳೆ 234 (ಹೊಸದಾಗಿ 69) ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಒತ್ತುವರಿಯಾಗಿರುವ ಕಟ್ಟಡಗಳು, ಮಳಿಗೆಗಳ ತೆರವಿಗೆ ಈಗಾಗಲೇ ಮಾಲೀಕರಿಗೆ ಸೂಚನೆ ನೀಡಲಾಗಿತ್ತು.

ಈಗಾಗಲೇ ಗೌರಿಬಿದನೂರಿನಿಂದ ತಿಪ್ಪೇನಹಳ್ಳಿ ಗ್ರಾಮದವರೆಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆದಿದ್ದು, ಉಳಿದ ಭಾಗವಾಗಿ ನಗರದ ಶಿಡ್ಲಘಟ್ಟ ವೃತ್ತದಿಂದ ಗೌರಿಬಿದನೂರು ರಸ್ತೆಯ ಎಪಿಎಂಸಿ ಮಾರುಕಟ್ಟೆಯವರೆಗೂ ಒತ್ತುವರಿ ತೆರವುಗೊಳಿಸುವ ಕಾರ್ಯ ಬಾಕಿ ಉಳಿದಿದ್ದು ಈ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ.
ರಸ್ತೆಯ ಮಧ್ಯೆ ಭಾಗದಿಂದ ಎಡ- ಬಲ 50 ಅಡಿಯಷ್ಟು ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು, ಪ್ರಾಧಿಕಾರವು ಒತ್ತುವರಿ ತೆರವಿಗಾಗಿ ರಸ್ತೆಯ ಎರಡು ಬದಿಯಲ್ಲಿ ಎಲ್ಲೋ ಹಾಗೂ ರೆಡ್ ಮಾರ್ಕ್ ಅನ್ನು ಗುರುತಿಸಿದೆ.

ಗುರುತು ಮಾಡಿರುವಂತೆ ಒತ್ತುವರಿ ತೆರವುಗೊಳಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಿರುವ ಪ್ರಾಧಿಕಾರವು ಮೊದಲ ಭಾಗವಾಗಿ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ನೂ ಖಾಸಗೀ ಮತ್ತು ವಾಣಿಜ್ಯ ಕಟ್ಟಡಗಳನ್ನು ಮಾಲೀಕರೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಲು ಸಮಯಾವಕಾಶವನ್ನು ನೀಡಿ, ಶೀಘ್ರವಾಗಿ ಒತ್ತುವರಿ ತೆರವಿಗೆ ಪ್ರಾಧಿಕಾರವು ಮನವಿ ಮಾಡಿದೆ.
ಮುಂಜಾಗ್ರತವಾಗಿ ಖಾಸಗಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳ ಮಾಲೀಕರು ಒತ್ತುವರಿ ತೆರವನ್ನು ಸ್ವತಃ ಕೈಗೊಂಡರೆ ಕಟ್ಟಡಗಳಿಗೆ ಆಗುವ ಹೆಚ್ಚಿನ ಹಾನಿ ತಪ್ಪಲಿದೆ. ಇಲ್ಲವಾದಲ್ಲಿ ಪ್ರಾಧಿಕಾರದಿಂದಲೇ ತೆರವುಗೊಳಿಸಿದರೆ ಆದರಿಂದಾಗುವ ಹಾನಿಗೆ ಪ್ರಾಧಿಕಾರ ಹೊಣೆಯಲ್ಲ ಎಂದಿದೆ. ಇದಕ್ಕೆ ತಗಲುವ ವೆಚ್ಚವನ್ನು ಮಾಲೀಕರೇ ಭರಿಸಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಸ್ಥಳದಲ್ಲಿ ಪೊಲೀಸರ ನಿಯೋಜನೆ:
ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಯಾವುದೇ ಅಹಿತರಕ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ಥಳದಲ್ಲಿ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುವ ಮೂಲಕ ಬಿಗಿ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆ ಮಾಡುತ್ತಿದೆ.
ಮಾಲೀಕರಿಗೆ ಶಾಕ್:
ಖಾಸಗೀ ಕಟ್ಟಡ, ವಾಣಿಜ್ಯ ಮಳಿಗೆಗಳ ಮಾಲೀಕರು ಒತ್ತುವರಿ ತೆರವುಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಬಹುದೆಂಬ ಉದ್ದೇಶದಿಂದ ಮೂರು ದಿನಗಳ ಕಾಲ ( ಶನಿವಾರ, ಭಾನುವಾರ ಹಾಗೂ ಸೋಮವಾರ ) ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ರಜೆ ಇರುವ ಕಾರಣ ಒತ್ತುವರಿ ತೆರವು ಕಾರ್ಯಚರಣೆ ನಡೆಸಲು ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ಅರಿತಿರುವ ಪ್ರಾಧಿಕಾರವು ಶನಿವಾರ ಬೆಳ್ಳಂಬೆಳ್ಳಗೆ ಹಿಟಾಚಿ ಯಂತ್ರಗಳ ಮೂಲಕ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜೋರಾಗಿಯೇ ಆರಂಭಿಸುವ ಮೂಲಕ ಖಾಸಗೀ, ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಶಾಕ್ ನೀಡಿದೆ ಎಂಬ ಅಭಿಪ್ರಾಯವು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.












Click it and Unblock the Notifications