ಸಚಿವ ಸಂಪುಟ ವಿಸ್ತರಣೆ: ಆರ್. ಅಶೋಕ್ ನೀಡಿದ ಬ್ರೇಕಿಂಗ್ ನ್ಯೂಸ್
Recommended Video
ಚಿಕ್ಕಬಳ್ಳಾಪುರ, ಜ 26: ಸಚಿವ ಸಂಪುಟ ವಿಸ್ತರಣೆಯ ಹಲವು ಗೊಂದಲಗಳ ನಡುವೆ, ಕಂದಾಯ ಸಚಿವ ಆರ್.ಅಶೋಕ್ ನಗರದಲ್ಲಿ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದಾರೆ.
ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶೋಕ್, "ಮೊದಲು ನಮ್ಮ ಆದ್ಯತೆ ಏನಿದ್ದರೂ, ಅದು ಗೆದ್ದವರಿಗೆ" ಎನ್ನುವ ಮೂಲಕ, ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೆ ಶಾಕ್ ನೀಡಿದ್ದಾರೆ.
"ಸೋತವರಿಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಸೂಕ್ತ ಸಮಯದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕೋ, ಅದನ್ನು ಅವರು ತೆಗೆದುಕೊಳ್ಳುತ್ತಾರೆ" ಎಂದು ಅಶೋಕ್ ಹೇಳಿದರು.

"ಸದ್ಯಕ್ಕಂತೂ ಸೋತವರಿಗೆ ಸ್ಥಾನಮಾನ ನೀಡುವ ವಿಚಾರ ಚರ್ಚೆಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಸಂದರ್ಭಕ್ಕ ತಕ್ಕಂತೆ, ಯಡಿಯೂರಪ್ಪನವರು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ" ಎಂದು ಅಶೋಕ್ ಸ್ಪಷ್ಟ ಪಡಿಸಿದರು.
ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆಗೆ 'ಸದ್ಯದಲ್ಲೇ' ಎಂದು ಉತ್ತರ ನೀಡಿರುವ ಆರ್.ಅಶೋಕ್, ಆ ಸದ್ಯ ಬರುವುದಾದರೂ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಲಿಲ್ಲ.
ಕುಮಾರಸ್ವಾಮಿಯವರಿಗೆ ಬೆದರಿಕೆ ಪತ್ರ ಬಂದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅಶೋಕ್, "ಊರಿನವರನ್ನೆಲ್ಲಾ ಬೆದರಿಸುವವರಿಗೆ, ಯಾರಾದರೂ ಬೆದರಿಕೆ ಹಾಕಲು ಸಾಧ್ಯವೇ. ದೂರು ನೀಡಿದರೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಅಶೋಕ್ ಹೇಳಿದರು.












Click it and Unblock the Notifications