ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಉಚಿತ ವಿತರಣೆ: ಸಿಎಂ ಪಳನಿಸ್ವಾಮಿ
ಚೆನ್ನೈ, ಅಕ್ಟೋಬರ್ 22: ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಭರವಸೆ ನೀಡಿದ್ದಾರೆ.
ಗುರುವಾರ ಈ ಕುರಿತು ಮಾತನಾಡಿದ ಅವರು, ಕೊರೊನಾ ಲಸಿಕೆ ಸಿದ್ಧವಾದ ಬಳಿಕ ತಮಿಳುನಾಡಿನ ಜನತೆಗೆ ಉಚಿತವಾಗಿ ವಿತರಣೆ ಮಾಡುತ್ತೇವೆ.
ಮುಂದಿನ ವರ್ಷ ಅಕ್ಟೋಬರ್ 07ರಂದು ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಕಟಿಸಿದೆ ಎನ್ನುವ ಮಾತುಗಳೂ ಕೇಳಿಬಂದಿದೆ.

ಬಿಹಾರ ಚುನಾವಣೆ ಸಂದರ್ಭದಲ್ಲಿ ಇದೀಗ ಬಿಜೆಪಿ ಬಿಹಾರದ ಜನತೆಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೂಡ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ಸಿದ್ಧವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಮೂರು ಲಸಿಕೆ ಅಭ್ಯರ್ಥಿಗಳು ಲಸಿಕೆಯ ಪ್ರಯೋಗದಲ್ಲಿ ತೊಡಗಿವೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ಜೈಡನ್‌ನ ಜೈಕೋವ್ ಡಿ ಎರಡನೆಯ ಹಂತದ ಪ್ರಯೋಗದಲ್ಲಿವೆ. ಮತ್ತೊಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಕೊವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 77 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಒಂದು ದಿನದಲ್ಲಿ 702 ಮಂದಿ ಮೃತಪಟ್ಟಿದ್ದಾರೆ.
ಹೊಸದಾಗಿ 55,838 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 77,06,946 ಪ್ರಕರಣಗಳಿವೆ. 7,15,812 ಸಕ್ರಿಯ ಪ್ರಕರಣಗಳಿವೆ. 68,74,518 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂಡಿದ್ದಾರೆ. ಇದುವರೆಗೆ ಒಟ್ಟು 1,16,616 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications