ತಮಿಳುನಾಡು ವಿಧಾನಸಭೆ ಚುನಾವಣೆ 2021: 171 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಐಎಡಿಎಂಕೆ
ಚೆನ್ನೈ, ಮಾರ್ಚ್ 10: ತಮಿಳುನಾಡು ವಿಧಾನಸಭೆ ಚುನಾವಣೆಗೆ ಎಐಎಡಿಎಂಕೆ 171 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ. ಜತೆಗೆ ಮಿತ್ರ ಪಕ್ಷ ಬಿಜೆಪಿ ಹಾಗೂ ಪಿಎಂಕೆಗೆ ತಲಾ 20 ಹಾಗೂ 23 ಸೀಟುಗಳನ್ನು ಹಂಚಿಕೆ ಮಾಡಿದೆ.
ಏಪ್ರಿಲ್ 6 ರಂದು ನಡೆಯುವ ಚುನಾವಣೆಗೆ ಬಹುತೇಕ ಎಲ್ಲಾ ಹಾಲಿ ಸಚಿವರಿಗೂ ಹಾಗೂ ಶಾಸಕರಿಗೆ ಎಐಎಡಿಎಂಕೆ ಟಿಕೆಟ್ ನೀಡಿದೆ. ಆಡಳಿತ ವಿರೋಧಿ ಅಲೆ ಇದ್ದರೂ, ಟಿಕೆಟ್ ಬದಲಿಸುವ ಸಾಹಸಕ್ಕೆ ಎಐಎಡಿಎಂಕೆ ಕೈ ಹಾಕಿಲ್ಲ.
ಎಐಎಡಿಎಂಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಸಚಿವರಾದ ಎಸ್‌ಪಿ ವೇಲುಮಣಿ, ತಂಗಮಣಿ, ವಿವಿ ರಮಣ, ಮಾಫೋಯಿ ಪಾಂಡಿಯಾ ರಾಜನ್, ಜೆಸಿಡಿ ಪ್ರಭಾಕರ್, ಗೋಕು ಲ ಇಂದಿರಾ, ವಲಾರ್ಮತಿ, ಕೆಪಿ ಮುನುಸ್ವಾಮಿ, ಸೆಂಗೋಟಯಿನ್, ಇಳಚಿ ಜಯರಾಮನ್, ದಿಂಡಿಗುಲ್ ಶ್ರೀನಿವಾಸನ್, ಎಂಸಿ ಸಂಪತ್, ಒ ಎಸ್ ಮಣಿಯನ್ ಸಿ, ವಿಜಯಭಾಸ್ಕರ್ ಸೇರಿ ಇತರ 171 ಮುಖಂಡರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ಬಿಜೆಪಿಗೆ ತಮಿಳುನಾಡಿನಲ್ಲಿ ಒಟ್ಟು 20 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದ್ದು, ಅವುಗಳ ಪಟ್ಟಿ ಇಂತಿದೆ.ತಿರುವಣ್ಣಾಮಲೈ, ನಾಗೇರ್‌ಕೊಯಿಲ್, ಕುಲಾಚಲ್, ವಿಲವಂಕೋಡು, ರಾಮನಾಥಪುರಂ, ಮೋದಕ್ಕುರಿಚಿ, ಹಾರ್ಬರ್, ಥೌಸೆಂಡ್ ಲೈಟ್ಸ್, ತಿರುಕೊವಿಲೂರು, ಥಿಟ್ಟಕುಡಿ, ಕೊಯಿಮತ್ತೂರು ದಕ್ಷಿಣ, ವಿರುಧಾನಗರ, ಅರವಕ್ಕುರಿಚಿ, ತಿರುವಾಯೂರು, ಊಟಿ, ತಿರುನೇಲ್‌ವೇಲಿ, ಥಾಲಿ, ಕಾರೈಕುಡಿ, ಧಾರಾಪುರಂ, ಮಧುರೈ ಉತ್ತರ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್‌ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ.
ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ತಮಿಳುನಾಡು ವಿಧಾನಸಭೆಯ ಅವಧಿಯು ಮೇ 24ರಂದು ಅಂತ್ಯಗೊಳ್ಳಲಿದೆ.
ಚುನಾವಣೆಯ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಹೀಗಾಗಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಹಾಲಿ ವಿಧಾನಸಭೆ ವಿಸರ್ಜನೆಯಾಗಿ ಹೊಸ ಸರ್ಕಾರ ಸ್ಥಾಪನೆಯಾಗಬಹುದು. ಆದರೆ ಇದು ಫಲಿತಾಂಶವನ್ನು ಅವಲಂಬಿಸಿದೆ. ತಮಿಳುನಾಡು ವಿಧಾನಸಭೆಯ ಒಟ್ಟು ಸೀಟುಗಳ ಪೈಕಿ 44 ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಎರಡು ಸೀಟುಗಳು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿವೆ.












Click it and Unblock the Notifications