ಲೈಂಗಿಕ ಕಿರುಕುಳ : ಸನ್ ನೆಟ್ವರ್ಕ್ ಸಿಒಒ ಬಂಧನ
ಚೆನ್ನೈ, ಡಿ.26: ಸನ್ ನೆಟ್‌ವರ್ಕ್‌ನ ಸಿಒಒ ಪ್ರವೀಣ್ ಅವರನ್ನು ಲೈಂಗಿಕ ಕಿರುಕುಳ ಆರೋಪದ ಮೇಲೆ ಸಿಸಿಬಿ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. 52 ವರ್ಷ ವಯಸ್ಸಿನ ಪ್ರವೀಣ್ ಅವರ ವಿರುದ್ಧ ಕಂಪನಿಯ ಸಹದ್ಯೋಗಿ ದೀಪ್ತಿ ಎಂಬುವರು ದೂರು ನೀಡಿದ್ದರು.
ಸನ್ ಗ್ರೂಪ್ ಗೆ ಸೇರಿರುವ ಸೂರ್ಯ ಟಿವಿ ವಾಹಿನಿಯ ಫೋಗ್ರಾಂ ಡೈರೆಕ್ಟರ್ ಆಗಿದ್ದ ದೀಪ್ತಿ ಅವರು ಪ್ರವೀಣ್ ವಿರುದ್ಧ ದೂರು ನೀಡಿದ್ದರು. ದೀಪ್ತಿ ಅವರ ಸೋದರ ದೂರಿಗೆ ಪೂರಕ ಪುರಾವೆ ಒದಗಿಸಿದ್ದರು. ಪರಿಶೀಲನೆ ನಡೆಸಿದ ಪೊಲೀಸರು ಅಣ್ಣಾನಗರ್ ನಿವಾಸದಲ್ಲಿದ್ದ ಪ್ರವೀಣ್ ಛತಂಗಥೋಡಿ ಅವರನ್ನು ಬಂಧಿಸಿದ್ದಾರೆ.

ಮಲೆಯಾಳಂನ ಸೂರ್ಯ ಟಿವಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರವೀಣ್ ಅವರು ಕಳೆದ ಐದು ತಿಂಗಳ ಹಿಂದೆ ದೀಪ್ತಿಗೆ ಕಿರುಕುಳ ನೀಡಿದ್ದರು ಎನ್ನಲಾಗಿದೆ. ದೀಪ್ತಿ ಇದ್ದ ಕೊಚ್ಚಿಗೆ ವರ್ಗಾವಣೆಗೊಂಡು ಪ್ರವೀಣ್ ಹೆಚ್ಚಿನ ಕಿರುಕುಳ ನೀಡತೊಡಗಿದ ಗಾಬರಿಗೊಂಡ ದೀಪ್ತಿ ಪೊಲೀಸರ ಮೊರೆ ಹೊಕ್ಕಿದ್ದಾರೆ.
ದೀಪ್ತಿಗೆ ಸಿಗಬೇಕಿದ್ದ ಸಂಬಳ, ಭವಿಷ್ಯ ನಿಧಿ ಮೊತ್ತ ಸೇರಿದಂತೆ 35 ಲಕ್ಷ ರು ತನ್ನ ವಶದಲ್ಲಿರಿಸಿಕೊಂಡಿದ್ದ ಪ್ರವೀಣ್ ಆಕೆಯನ್ನು ಪರಿ ಪರಿಯಾಗಿ ಕಾಡಿಸುತ್ತಿದ್ದ. ವಾಟ್ಸಪ್ ಸಂಭಾಷಣೆಗಳು, ಸಂದೇಶಗಳು ಹಾಗೂ ದೂರವಾಣಿ ಕರೆ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ದೈಹಿಕ ಹಾಗೂ ಮಾನಸಿಕ ಹಿಂಸೆಯಾಗಿರುವುದನ್ನು ದೃಢಪಡಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.
ಕಲಾನಿಧಿ ಮಾರನ್ ಒಡೆತನದ ಸನ್ ಗ್ರೂಪ್ ಸಂಸ್ಥೆ ಹತ್ತು ಹಲವು ವಿವಾದಕ್ಕೆ ಗುರಿಯಾಗಿದೆ. ಇತ್ತೀಚೆಗೆ ಸನ್ ಟಿವಿ ಸುದ್ದಿ ಸಂಪಾದಕರಾಗಿದ್ದ ರಾಜ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. (ಏಜೆನ್ಸೀಸ್)












Click it and Unblock the Notifications